ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಆಡಳಿತ ಯಂತ್ರ ಕುಸಿಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳು ಕೂಡ ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಈಗ ಸರ್ಕಾರವು ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ರಾಜ್ಯದಲ್ಲಿ ಖಾಲಿ ಇರುವ ಪಿಎಸ್ ಐ ಮತ್ತು ಪಿಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಪಿಎಸ್ ಐ ಹಾಗೂ ಪಿಸಿ ಹುದ್ದೆಗಳು ಖಾಲಿ ಇರುವುದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸದ್ಯದಲ್ಲಿಯೇ ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದಿದ್ದಾರೆ.

ಹಿಂದೆ ಇದ್ದ ಸರ್ಕಾರದ ಅವಧಿಯಲ್ಲಿ 545 ಪಿಎಸ್ ಐ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಉಂಟಾದ ಅಕ್ರಮದಿಂದಾಗಿ ಸಾಕಷ್ಟು ತೊಂದರೆಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿಯಬೇಕಾಯಿತು. ಈಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ 545 ಪಿಎಸ್‌ಐ ನೇಮಕಾತಿಯಲ್ಲಿಮ ಸಮಸ್ಯೆಯನ್ನು ಬಗೆಹರಿಸಿ ತರಬೇತಿಗೆ ಕಳುಹಿಸಲಾಗಿದೆ. 402 ಪಿಎಸ್‌ಐ ನೇಮಕಾತಿಯು ಪೂರ್ಣಗೊಂಡಿದ್ದು ತರಬೇತಿಗೆ ಕಳುಹಿಸಲಾಗುತ್ತಿದೆ. ಆದರೂ ಇನ್ನೂ ರಾಜ್ಯದಲ್ಲಿ 600 ಪಿಎಸ್ ಐ ಹುದ್ದೆಗಳು ಖಾಲಿ ಇಲೆ. ಸದ್ಯದಲ್ಲಿಯೇ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ.

4500 ಪೊಲೀಸ್ ಕಾನ್‌ ಸ್ಟೇಬಲ್‌ ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಸದ್ಯದಲ್ಲಿಯೇ ಕಾನ್ ಸ್ಟೇಬಲ್ ಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಒಳಮೀಸಲಾತಿ ಪ್ರಕ್ರಿಯೆಯಿಂದಾಗಿ 75 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಸಭೆ ಕರೆಯಲಿದ್ದಾರೆ. ಸಭೆಯಲ್ಲಿ ಚರ್ಚಿಸಿದ ನಂತರ ಇಲಾಖೆಯಲ್ಲಿನ ಒಟ್ಟು 8 ಸಾವಿರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

Share.
Leave A Reply