Site icon BosstvKannada

ಮಧ್ಯಪ್ರಾಚ್ಯ ದೇಶಗಳಲ್ಲಿ ಮಹಾ ಸಂಘರ್ಷ : ಭಾರತದ ಭವಿಷ್ಯದ ಬಗ್ಗೆ ಜೈಶಂಕರ್ ಮಾಹಿತಿ

ಬೆಂಗಳೂರು, ಮಾ.09: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಕುರಿತು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಉದ್ವಿಗ್ನತೆಯನ್ನು ಶಮನಗೊಳಿಸಲು ʼಸಂವಾದ ಮತ್ತು ರಾಜತಾಂತ್ರಿಕತೆʼಯೊಂದೇ ಪರಿಹಾರ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಪಾದಿಸಿದ್ದಾರೆ.

ಸೋಮವಾರ ರಾಜ್ಯಸಭೆಯ ಸದನದಲ್ಲಿ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಜೈಶಂಕರ್ ಅವರು ದೇಶದ ವಿದೇಶಾಂಗ ನೀತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಅಂತ ಸದನಕ್ಕೆ ತಿಳಿಸಿದರು.

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಮಾ.1 ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಭದ್ರತಾ ಸಮಿತಿ ಸಭೆ ನಡೆಸಲಾಗಿದೆ. ಇರಾನ್ ಮೇಲಿನ ವೈಮಾನಿಕ ದಾಳಿಗಳು ಮತ್ತು ಗಲ್ಫ್ ಪ್ರದೇಶದ ಇತರೆಡೆ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಒಂದು ಕೋಟಿ ಭಾರತೀಯರ ಹಿತರಕ್ಷಣೆಗಾಗಿ ಸಂಬಂಧಿತ ಸಚಿವಾಲಯಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ ಎಂದು ಜೈಶಂಕರ್ ವಿವರಿಸಿದರು.

ಯುದ್ಧದ ಅನಾಹುತಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಈ ಸಂಘರ್ಷದಲ್ಲಿ ಇಬ್ಬರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಹಂಚಿಕೊಂಡರು. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೈ ಅಲರ್ಟ್‌ನಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಾಯ ಮಾಡುತ್ತಿದೆ.

ಇಂಧನ ಭದ್ರತೆಗೆ ಸಂಚಕಾರ :
ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಈ ಪ್ರದೇಶವು ಅತ್ಯಂತ ನಿರ್ಣಾಯಕವಾಗಿದೆ. ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ಗಡಿ ದಾಟಿರುವುದು ಭಾರತಕ್ಕೆ ಆರ್ಥಿಕವಾಗಿ ಸವಾಲಾಗಿದೆ ಅಂತಲೂ ಅಭಿಪ್ರಾಯಪಟ್ಟರು.

Exit mobile version