Site icon BosstvKannada

ಹನಿಟ್ರ್ಯಾಪ್ ಬಲೆಗೆ ಇಂಜಿನಿಯರ್ ನ ಬೀಳಿಸಿ ವಸೂಲಿ: ಗ್ಯಾಂಗ್ ಅರೆಸ್ಟ್

ಬೆಂಗಳೂರು: ಹನಿಟ್ರ್ಯಾಪ್ ಬಲೆಗೆ ಸಾಫ್ಟ್‌ವೇರ್‌ ಇಂಜಿನಿಯರ್ ನನ್ನು ಬೀಳಿಸಿ ಹಣ ಲಪಟಾಯಿಸಿದ ಗ್ಯಾಂಗ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

20 ದಿನಗಳ ಅಂತರದಲ್ಲಿ ಎರಡು ಬಾರಿ ಲೂಟಿ ಮಾಡಿದ ಐವರು ಸದಸ್ಯರ ಗ್ಯಾಂಗ್ ನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳಾ ಮೇಕಪ್ ಆರ್ಟಿಸ್ಟ್‌ಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಟೆಲಿಗ್ರಾಂ ಮೂಲಕ ಪರಿಚಯವಾದ ಯುವತಿಯನ್ನು ಭೇಟಿಯಾದ ಟೆಕ್ಕಿಯನ್ನೇ ವಂಚಿಸಿ ಹಣ ವಸೂಲಿ ಮಾಡಿದ್ದಾರೆ. ಕೊನೆಗೆ ಒಂದು ಲಕ್ಷಕ್ಕೆ ಬೇಡಿಕೆಯಿಟ್ಟು ಮೇಲೆ ಹಲ್ಲೆ ಮಾಡುವಾಗ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಜಗದೀಶ್ (35), ಮಂಜುನಾಥ್ (30) ಹಾಗೂ ಲೋಕೇಶ್ (32) ನನ್ನು ಬಂಧಿಸಿದ್ದಾರೆ.

ಸಂತ್ರಸ್ತನಿಗೆ ಡಿ. 1 ರಂದು ಅಪರಿಚಿತ ಟೆಲಿಗ್ರಾಂ ಐಡಿಯಿಂದ ಸಂದೇಶ ಬಂದಿದೆ ಡೇಟಿಂಗ್ ಪ್ಲಾಟ್‌ಫಾರ್ಮ್ ಮೂಲಕ ವೀಡಿಯೋ ಕಾಲ್ ಹಾಗೂ ಒಡನಾಟದ ಆಮಿಷ ಒಡ್ಡಿದ ಸುಮಲತಾ 20 ಸಾವಿರ ರೂ.ಗೆ ಬೇಟಿಕೆ ಇಟ್ಟಿದ್ದಳು. ಮಾತನ್ನು ನಂಬಿ ನಿಗದಿತ ಸ್ಥಳಕ್ಕೆ ಹೋದಾಗ, ಆಕೆ ಅವರನ್ನು ಒಂದು ಮನೆಗೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ. ಬಳಿಕ ಆತನ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು, ಪೊಲೀಸರಿಗೆ ದೂರು ನೀಡಿದರೆ ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಹೆದರಿ ಸಂತ್ರಸ್ತ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಸಂತ್ರಸ್ತ ಸಾಫ್ಟ್‌ವೇರ್‌ ಎಂಜಿನಿಯರ್‌ ಪೊಲೀಸರಿಗೆ ದೂರು ಕೊಟ್ಟಿಲ್ಲ ಎನ್ನುವುದನ್ನು ತಿಳಿದುಕೊಂಡ ಸುಮಲತಾ, ತನ್ನ ಸಹಚರ ಹರ್ಷಿಣಿ (ಸ್ವೀಟಿ) ಮೂಲಕ ಹೊಸ ಟೆಲಿಗ್ರಾಂ ಐಡಿಯಿಂದ ಮತ್ತೆ ಸಂತ್ರಸ್ತನನ್ನು ಸಂಪರ್ಕಿಸಿದ್ದಾಳೆ. ‘ಸ್ವೀಟಿ’ ಹೆಸರಿನಲ್ಲಿ 20 ಸಾವಿರಕ್ಕೆ ಬೇಡಿಕೆ ಇಟ್ಟು ಆರ್.ಆರ್. ನಗರಕ್ಕೆ ಕರೆಸಿದ್ದಾರೆ.

ಸಂತ್ರಸ್ತ ಅಲ್ಲಿಗೆ ತಲುಪುತ್ತಿದ್ದಂತೆಯೇ ಸುಮಲತಾ ಮತ್ತು ಆಕೆಯ ಮೂವರು ಸಹಚರರು ಆತನ ಮೇಲೆ ದಾಳಿ ಮಾಡಿದ್ದಾರೆ. ಪರ್ಸ್ ಕಿತ್ತುಕೊಂಡ ಆರೋಪಿಗಳು, ಅವರ ಮುಖ ಹಾಗೂ ಗುಪ್ತಾಂಗಕ್ಕೆ ಹಲ್ಲೆ ನಡೆಸಿದ್ದಾರೆ. 1 ಲಕ್ಷ ರೂ. ನೀಡಬೇಕೆಂದು ಜೀವ ಬೆದರಿಕೆ ಹಾಕಿದ್ದಾರೆ. ಆಗ ಸಂತ್ರಸ್ತ ಕಿರುಚಾಡುವ ಶಬ್ದ ಕೇಳಿ ಸ್ಥಲೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಐವರನ್ನು ಬಂಧಿಸಿ, ಸಂತ್ರಸ್ತರ ಹಣವನ್ನು ಸ್ಥಳದಲ್ಲೇ ವಾಪಸ್‌ ಕೊಡಿಸಿದ್ದಾರೆ.

Exit mobile version