Site icon BosstvKannada

ಇನ್ಮುಂದೆ ಶಾಸಕರ ಕರೆ ಸ್ವೀಕರಿಸದಿದ್ದರೆ ತಕ್ಕ ಶಾಸ್ತಿ! ಅಧಿಕಾರಿಗಳು ಸಬೂಬು ಹೇಳುವಂತಿಲ್ಲ!


ಬೆಂಗಳೂರು: ಶಾಸಕರು ಜನರ ಸಮಸ್ಯೆ ಹೊತ್ತು ಅಧಿಕಾರಿಗಳಿಗೆ ಕರೆ ಮಾಡಿದರೆ, ಅಧಿಕಾರಿಗಳು ಸ್ವೀಕರಿಸುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಖಡಕ್ ಸೂಚನೆ ನೀಡಿದೆ. ಈ ಕುರಿತು ಆದೇಶ ಹೊರಡಿಸಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಇನ್ನು ಮುಂದೆ ಎಲ್ಲ ಸರ್ಕಾರಿ ಅಧಿಕಾರಿಗಳು ಎಂಎಲ್ಎಗಳ ಮತ್ತು ಎಂಎಲ್ಸಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಲೇಬೇಕು. ಒಂದು ವೇಳೆ ಕರೆ ಬಂದಾಗ ಇತರ ಕೆಲಸಗಳಲ್ಲಿ ವ್ಯಸ್ತರಾಗಿದ್ದಲ್ಲಿ, ಮರಳಿ ಕರೆ ಮಾಡಿ ಮಾತನಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರುಗಳಿಗೆ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ಬೇರೆ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದೆ ಇರುವುದು ನನ್ನ ಗಮನಕ್ಕೆ ಬಂದಿದೆ.

ಹೀಗಾಗಿ ಇನ್ನು ಮುಂದೆ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಮಾನ್ಯ ಲೋಕಸಭಾ ಹಾಗೂ ಸಭಾ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ತಾವು ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಅವರುಗಳಿಗೆ ತಮ್ಮ ಕರ್ತವ್ಯ ಮುಗಿದ ನಂತರ ಮರು ಕರೆ ಮಾಡುವುದರ ಮೂಲಕ ಸೂಕ್ತವಾಗಿ ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಈ ಮೂಲಕ ಸೂಚನೆಯನ್ನು ನೀಡಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Exit mobile version