ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಪುತ್ರ ಕೆ ಈ ಕಾಂತೇಶ್ ಮತ್ತು ಸೊಸೆ ಆರ್ ಶಾಲಿನಿ ವಿರುದ್ಧ ಲೋಕಾಯುಕ್ತದಲ್ಲಿ FIR ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 13(1)(ಡೀ), 13(1)(ಸಿ), 120(ಬಿ) ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಹಿಂದೆ ಶಿವಮೊಗ್ಗದ ವಕೀಲ ವಿನೋದ್, ಈಶ್ವರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದಲ್ಲಿ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು.
ಆದರೆ, ಹೈಕೋರ್ಟ್‌ನಲ್ಲಿ ಲೋಕಾಯುಕ್ತ ಸಲ್ಲಿಸಿದ ಬಿ-ರಿಪೋರ್ಟ್‌ನ್ನು ವಕೀಲ ವಿನೋದ್ ಪ್ರಶ್ನಿಸಿದ್ದರು. ಸುಮಾರು 2 ತಿಂಗಳ ಹಿಂದೆ ಹೈಕೋರ್ಟ್, ಈಶ್ವರಪ್ಪ ವಿರುದ್ಧ ಪ್ರಕರಣವನ್ನು ಮತ್ತೆ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ FIR ದಾಖಲಿಸಲಾಗಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ಅವರ ವಿರುದ್ಧ FIR ದಾಖಲಾಗಿದ್ದು, ಜುಲೈ 4ರಂದು ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ

