ಬಾಗಲಕೋಟೆ: ಮೊಬೈಲ್ ಬಳಸಬೇಡಿ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿರುವ ಘಟನೆ ನಡೆದಿದೆ.
ಈ ಘಟನೆ ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಹಾಸ್ಟೆಲ್ ನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂದು ತಾಕೀತು ಮಾಡಿದ್ದಕ್ಕೆ ಕೋಪಗೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯರನ್ನು ಪೊಲೀಸರು ವಿಜಯಪುರದಲ್ಲಿ ಪತ್ತೆ ಮಾಡಿ ಕರೆ ತಂದಿದ್ದಾರೆ ಎನ್ನಲಾಗಿದೆ.
ಹಾಸ್ಟೆಲ್ ನಲ್ಲೇ ಮೊಬೈಲ್ ಬಳಕೆ ಮಾಡುತ್ತಿದ್ದ ವಿದ್ಯಾರ್ಥಿನಿಯರನ್ನು ತಡೆದ ಹಾಸ್ಟೆಲ್ ಸಿಬ್ಬಂದಿ, ಮೊಬೈಲ್ ಬಳಸಿದರೆ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೋಪಗೊಂಡ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ರಾತ್ರಿ 8 ಗಂಟೆಗೆ ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿನಿಯರನ್ನು ಮಧ್ಯರಾತ್ರಿ 12.30ರ ವೇಳೆಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ವಿದ್ಯಾರ್ಥಿನಿಯರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

