ಕನ್ನಡ ಬಿಗ್‌ಬಾಸ್ ಸೀಸನ್ 12ರ ಕಾವು ಜೋರಾಗಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾದಾಟ ತೀವ್ರಗೊಂಡಿದೆ. ಸ್ಥಾನ ಉಳಿಸಿಕೊಳ್ಳೋಕೆ ಅಂತಾ ದೊಡ್ಮನೆ ಸದಸ್ಯರು ಒಬ್ಬರಾದ್ಮೇಲೆ ಒಬ್ಬರನ್ನು ಬಾವಿಗೆ ತಳ್ಳುತ್ತಿದ್ದಾರೆ. ಇದ್ರ ಮಧ್ಯೆ ನಿನ್ನೆಯಷ್ಟೇ ಡಬಲ್ ಎಲಿಮಿನೇಷನ್ ಆಗಿದ್ದು, ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ ಒಂದೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಇದ್ರ ಮಧ್ಯೆ ದೊಡ್ಮನೆಯ ಮತ್ತೊಬ್ಬ ಸ್ಪರ್ಧಿ ಜಾನ್ವಿ ಡಿವೋರ್ಸ್ ಕಹಾನಿ ಭಾರಿ ಚರ್ಚೆಯಾಗುತ್ತಿದೆ.ನ್ಯೂಸ್ ಆಂಕರ್ ಆಗಿದ್ದ ಜಾಹ್ನವಿ ಡಿವೋರ್ಸ್ ಮ್ಯಾಟರ್ ಎಲ್ಲರಿಗೂ ಗೊತ್ತೇ ಇದೆ. ಆದ್ರೀಗ ಜಾಹ್ನವಿ ಬಿಗ್‌ಬಾಸ್ ಶೋನಲ್ಲಿ ತಮ್ಮ ಡಿವೋರ್ಸ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿದ್ದ ನಿರೂಪಕಿ ಜಾಹ್ನವಿ ತಮ್ಮ ಪತಿಗೆ ಅಕ್ರಮ ಸಂಬಂಧ ಇತ್ತು. ಹಾಗಾಗಿ ತಾವು ವಿಚ್ಛೇದನ ನೀಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೇ, ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ಗೊತ್ತಾಯ್ತು. ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ.. ಆಕೆ ನನ್ನ ಫ್ರೆಂಡ್ ಅಂತಾ ಜಾಹ್ನವಿ ಹೇಳಿಕೊಂಡಿದ್ದರು. ಇದಾದ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರಿ ಸದ್ದು ಮಾಡಿತ್ತು. ಸಿಂಪಥಿ ಗಿಟ್ಟಿಸಿಕೊಳ್ಳೋಕೆ ಜಾಹ್ನವಿ ಹೀಗೆಲ್ಲಾ ಪರ್ಸನಲ್ ಲೈಫ್ ಬಗ್ಗೆ ಮಾತಾಡ್ತಿದ್ದಾರೆ ಅಂತೆಲ್ಲಾ ದೊಡ್ಮನೆ ಫ್ಯಾನ್ಸ್ ಮಾತಾಡಿಕೊಂಡಿದ್ದರು. ಇದ್ರ ಬೆನ್ನಲ್ಲೇ ಜಾಹ್ನವಿಯವರ ಮಾಜಿ ಪತಿ ಕಾರ್ತಿಕ್ ಮೌನ ಮುರಿದಿದ್ದು, ಅವರ ಮಾತುಗಳಿಗೆ ಕೆಂಡಾಮಂಡಲರಾಗಿದ್ದು, ಸಿಂಪಥಿಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.

ಜಾಹ್ನವಿ ವಿರುದ್ಧ ಕಾರ್ತಿಕ್ ಮಾಡಿದ ಆರೋಪಗಳೇನು?
ಖಾಸಗಿ ಸುದ್ದಿವಾಹಿನಿಯ ಜೊತೆ ಮಾತನಾಡಿರುವ ಕಾರ್ತಿಕ್, ಜಾಹ್ನವಿ ನನ್ನ ತೇಜೋವಧೆ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಚಿತ್ರದುರ್ಗದಲ್ಲಿ ನಮ್ಮ ಉದ್ಯಮ ಇತ್ತು. ಬೆಂಗಳೂರಿನಲ್ಲಿ ನಾನು ಐಟಿ ಕೆಲಸದಲ್ಲಿದ್ದೆ. ಸಂಸಾರ ಆರಂಭಿಸಿದ ಮೇಲೆ ನಾವು ಬೆಂಗಳೂರಿಗೆ ಹೋಗೋಣ ಅಂತಾ ಹಠ ಹಿಡಿದರು. ಮದುವೆ ಆಗಿ ಕೆಲ ಸಮಯದ ಬಳಿಕ ನನ್ನ ತಾಯಿಯೊಟ್ಟಿಗೆ ಜಾಹ್ನವಿಗೆ ಹೊಂದಾಣಿಕೆ ಆಗಲಿಲ್ಲ. ಈ ಕಾರಣದಿಂದಾಗಿ ಜಾಹ್ನವಿ ಬಲವಂತದಿಂದ ಬೇರೆ ಮನೆ ಮಾಡಿಸಿದರು. ಬಳಿಕ ಸ್ವಂತ ಮನೆ ಬೇಕೆಂದು ಪಟ್ಟು ಹಿಡಿದ ಕಾರಣ ನಾನು ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡೆ ಅಂತಾ ಹೇಳಿಕೊಂಡಿದ್ದಾರೆ.
ಕುಡಿದು ಬಂದು ಜಾಹ್ನವಿಯ ಮೇಲೆ ಹಲ್ಲೆ ಮಾಡಿದ ವಿಷಯದ ಬಗ್ಗೆ ಮಾತನಾಡಿರುವ ಕಾರ್ತಿಕ್, ಹೌದು, ಹಲ್ಲೆ ಮಾಡಿರುವುದು ನಿಜ ಅಂತಾ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಸ್ಫೋಟಕ ಆರೋಪ ಮಾಡಿರುವ ಕಾರ್ತಿಕ್, ನಾನು ಜೊತೆಗಿದ್ದಾಗಲೂ ಬೇರೊಬ್ಬ ಗಂಡಸಿನ ಜೊತೆಗೆ ಸಲುಗೆಯಿಂದ ಇರುವುದು, ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ನೋಡಿದಾಗ ನನಗೆ ಸಿಟ್ಟು ಬಂದು ಹಾಗೆ ಮಾಡಿದ್ದೇನೆ ಅಂತಾ ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಲ್ಲದೇ, ಇಬ್ಬರೂ ಜೊತೆಗಿದ್ದಾಗ ನನ್ನ ಕೆಲಸವೂ ಹೋಯ್ತು. ಊರಿನ ಉದ್ಯಮವೂ ಡಲ್ ಆದ ಬಳಿಕ ಜಾಹ್ನವಿ ವರ್ತನೆ ಬದಲಾಯ್ತು. ಜಾಹ್ನವಿ ಉದ್ಯೋಗಕ್ಕೆ ಹೋಗಿ ಕೆಲಕಾಲ ಮನೆಯ ಇಎಂಐ ಅನ್ನು ಸಹ ಕಟ್ಟಿದರು. ಆದರೆ ಇಡೀ ಮನೆಯ ಸಾಲ ಅವರೇ ತೀರಿಸಿದರು ಎಂಬುದು ಸುಳ್ಳು. 60 ಸಾವಿರ ಸಂಬಳದಲ್ಲಿ 1.50 ಕೋಟಿಯ ಫ್ಲ್ಯಾಟ್ ಖರೀದಿ ಮಾಡಲು ಸಾಧ್ಯವಾ? ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.
ಮತ್ತೊಂದೆಡೆ, ನನ್ನ ತಂದೆ, ತಾಯಿ ಮೊಮ್ಮಗನನ್ನು ನೋಡಲು ಬಂದಾಗ ಕನಿಷ್ಟ ಸೌಜನ್ಯವನ್ನೂ ಅವರು ತೋರಿಸಲಿಲ್ಲ. ವಿಚ್ಛೇದನ ಆಗಿ ವರ್ಷಗಳೇ ಆದರೂ ಸಹ ನನ್ನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಹೀಗೆ ರಿಯಾಲಿಟಿ ಶೋಗಳಲ್ಲಿ ಮಾತನಾಡುತ್ತಿರುವುದು ಗಮನಿಸಿದರೆ ಅವರದ್ದು ವಿಕೃತ ಮನಸ್ಸು ಎಂಬುದು ಅರ್ಥವಾಗುತ್ತದೆ ಅಂತಾ ಕಾರ್ತಿಕ್ ನೋವು ತೋಡಿಕೊಂಡಿದ್ದಾರೆ. ಮಗನ ಶಿಕ್ಷಣಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ನ್ಯಾಯಾಲಯ ಹೇಳಿದೆ. ಅದರಂತೆ ನಾನು ಅವರ ಖಾತೆಗೆ ಹಣ ಹಾಕುತ್ತಿದ್ದೇನೆ. ಎಷ್ಟೇ ಆಗಲಿ ಅವನು ನನ್ನ ಮಗ. ಆದರೆ ಜಾಹ್ನವಿ ತಮ್ಮ ಪಾಡಿಗೆ ತಾವು ಇದ್ದರೆ ಒಳ್ಳೆಯದು. ಹೀಗೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ್ದು ಹೇಳಿದರೆ ನಮ್ಮ ಕುಟುಂಬಕ್ಕೆ ಸಮಸ್ಯೆ ಆಗುತ್ತದೆ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ. ಜಾಹ್ನವಿ ವಿರುದ್ಧ ಮಾಜಿ ಪತಿ ಕಾರ್ತಿಕ್ ಮಾತ್ರವೇ ಅಲ್ಲದೆ ಕಾರ್ತಿಕ್ ಅವರ ಹಾಲಿ ಪತ್ನಿ ಸಹ ಗರಂ ಆಗಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಜಾಹ್ನವಿ ಹಾಗೂ ಕಾರ್ತಿಕ್ ಮದುವೆ ಮುರಿಯಲು ನಾನು ಕಾರಣ ಅಲ್ಲ. ಜಾಹ್ನವಿ ಸುಳ್ಳುಗಳನ್ನು ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ.