ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ, ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ಆದೇಶ ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆ ನಿಗದಿಯಾಗಬೇಕಾಗಿದೆ.
ಪ್ರತಾಪ್ ಸಿಂಹ ಸಲ್ಲಿಸಿರುವ ಅರ್ಜಿಯಲ್ಲೇನಿದೆ?
ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ಚಾಮುಂಡೇಶ್ವರಿ ದೇವಿಯ ಗರ್ಭ ಗುಡಿಯ ಮುಂದೆ ಪವಿತ್ರ ದೀಪ ಹಚ್ಚಿ ಪೂಜಾ ಕೈಂಕರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇದು ನಿಜವಾದ ಭಕ್ತಿ ತೋರ್ಪಡಿಸುವುದಾಗಿದೆ. ಹೀಗಾಗಿ ಸರ್ಕಾರದ ನಿರ್ಧಾರದಿಂದ ಹಿಂದೂ ಸಂಘಟನೆಗಳು, ಧಾರ್ಮಿಕ ಮುಖಂಡರು ಹಾಗೂ ಸಾಮಾನ್ಯ ಭಕ್ತರಿಗೆ ಕಳವಳಕ್ಕೆ ಕಾರಣವಾಗಿದೆ”.
“ಧರ್ಮದ ಆಚರಣೆ ಎಂಬುದು ಸಂವಿಧಾನ ಬದ್ಧ ಹಕ್ಕಾಗಿದ್ಧು, ಧಾರ್ಮಿಕ ಸಂಪ್ರದಾಯಗಳು ಮುಂದುವರೆಯಬೇಕು. ಹೀಗಾಗಿ ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸಂವಿಧಾನದ ಪರಿಚ್ಛೇದ 25 ಮತ್ತು 26ರಲ್ಲಿ ಲಭ್ಯವಾಗಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಉಲ್ಲಂಘನೆಯಾದಂತಾಗಿದೆ”.
“ದಸರಾ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದ್ದು, ಇದಕ್ಕೆ ರಾಜ ಮನೆತನದವರು ಸೇರಿದಂತೆ ಇತರರೊಂದಿಗೆ ಸಮಾಲೋಚನೆ ಮಾಡದೇ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಡೆ ನೀಡಬೇಕು. ಸರ್ಕಾರದ ಈ ಕ್ರಮದಿಂದ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲದೆ, ಶಾಂತಿ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು ಇದನ್ನು ತಡೆಯಬೇಕಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ಮಧ್ಯಂತರ ತಡೆ ನೀಡಬೇಕು”.
“ಸರ್ಕಾರದ ಕ್ರಮ ಸಾಹಿತ್ಯದಲ್ಲಿನ ಸಾಧನೆ ಮತ್ತು ಸಾಂಸ್ಕೃತಿಕವಾಗಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದರೂ, ಸಮಾಜದ ವಿವಿಧ ವರ್ಗಗಳಲ್ಲಿನ ಸಾಂಪ್ರದಾಯಿಕ ಪದ್ಧತಿಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು” ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
Read Also : ರೆಡ್ಡಿಯ ಬಿಲ್ಡಪ್‌ಗಳನ್ನೆಲ್ಲ ಸದ್ಯದಲ್ಲೇ ಬಂದ್ ಮಾಡ್ತೀನಿ ; ಸಂಸದ ಶಶಿಕಾಂತ್ ಸಿಂಥಿಲ್

