
ಕಾಯಿಲೆ ಬಂದಾಗ ವಾಸಿ ಮಾಡಿಕೊಳ್ಳೋದಕ್ಕೆ ಏನೇನು ತಿನ್ನಬೇಕು ಅಂತಾ ಒಂದಷ್ಟು ಲಿಸ್ಟ್ ಮಾಡಿಕೊಂಡಿರ್ತೀವಿ. ಇದರ ಜೊತೆಗೆ ಏನು ತಿನ್ನಬಾರದು ಅನ್ನೋದು ಕೂಡಗೊತ್ತಿರಬೇಕು. ಆಗ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳೋದಿಲ್ಲ. ಕೆಲವೊಮ್ಮೆ ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಸೇವಿಸುವ ಆಹಾರಗಳು ನಮ್ಮ ದೇಹಕ್ಕೆ ಅಥವಾ ದೇಹಕ್ಕೆ ಬಂದಿರುವ ಕಾಯಿಲೆಗೆ ಹಿಡಿಸದೇ ಇರಬಹುದು. ಅದರಲ್ಲೂ ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಥೈರಾಯ್ಡ್ ಕುತ್ತಿಗೆಯಲ್ಲಿರುವ ಒಂದು ಸಣ್ಣ ಗ್ರಂಥಿಯಾಗಿದ್ದು, ಇದು ಚಿಟ್ಟೆಯ ರೆಕ್ಕೆಗಳಂತೆ ಕಾಣುತ್ತದೆ. ಇದರ ಕೆಲಸ ಹಾರ್ಮೋನುಗಳು ಚಯಾಪಚಯ ಮತ್ತು ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ಹಾರ್ಮೋನುಗಳು ಗ್ರಂಥಿಯಿಂದ ಬಿಡುಗಡೆಯಾಗುತ್ತವೆ ಮತ್ತು ರಕ್ತದ ಮೂಲಕ ದೇಹದ ಜೀವಕೋಶಗಳಿಗೆ ಚಲಿಸುತ್ತವೆ. ಈ ಕಾರಣದಿಂದಾಗಿ ದೇಹವು ಬೆಳವಣಿಗೆಯಾಗುತ್ತದೆ, ಮೂಳೆ ರಚನೆ, ಲೈಂಗಿಕ ಬೆಳವಣಿಗೆ ನಡೆಯುತ್ತದೆ ಮತ್ತು ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸಲಾಗುತ್ತದೆ.
ಥೈರಾಯ್ಡ್ ರೋಗಿಗಳಿಗೆ ಈ ಆಹಾರಗಳು ವಿಷಕ್ಕೆ ಸಮ!
ಸೋಯಾದಿಂದ ತಯಾರಿಸಿದ ಆಹಾರಗಳು
ಸೋಯಾ ಹಾಗೂ ಸೋಯಾ ಬಳಸಿ ತಯಾರಿಸಿದ ಆಹಾರಗಳಿಂದ ಥೈರಾಯ್ಡ್ ರೋಗಿಗಳು ದೂರ ಇರ್ಬೇಕು. ಸೋಯಾ ಬೀನ್ಸ್, ಸೋಯಾ ಚಂಕ್ಸ್, ಸೋಯಾ ಹಾಲು, ಸೋಯಾ ಸಾಸ್, ಟೋಫು ಇವುಗಳ ಸೇವನೆಯಿಂದ ಥೈರಾಯ್ಡ್ ಔಷಧಿ ಸರಿಯಾಗಿ ಕೆಲಸ ಮಾಡೋದಿಲ್ಲ.
ಕ್ರೂಸಿಫೆರಸ್ ತರಕಾರಿಗಳು
ತರಕಾರಿಗಳು ಫೈಬರ್‌ನಿಂದ ಸಮೃದ್ಧವಾದ ಹಾಗೂ ಅತ್ಯಂತ ಪೌಷ್ಟಿಕವಾದ ಆಹಾರ. ಆದ್ರೆ, ಕೆಲವೊಂದು ತರಕಾರಿಗಳು ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಒಳ್ಳೇದಲ್ಲ. ತರಕಾರಿಗಳಲ್ಲಿ ಕ್ರೂಸಿಫೆರಸ್ ತರಕಾರಿಗಳು ಎಂಬ ವಿಂಗಡಣೆ ಇದೆ. ಹೂಕೋಸು, ಎಲೆಕೋಸು, ಬ್ರೊಕೊಲಿ ಈ ರೀತಿಯ ತರಕಾರಿಗಳು ಈ ವಿಂಗಡಣೆಯಲ್ಲಿ ಬರುತ್ವೆ. ಇವುಗಳಲ್ಲಿ ಗಾಯ್ಟ್ರೋಜನ್ ಎಂಬ ಅಂಶವಿದೆ. ಇದು ಥೈರಾಯ್ಡ್ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತೆ.
ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳು
ಥೈರಾಯ್ಡ್ ರೋಗಗಳಿಗೆ ತೂಕ ಕಾಪಾಡಿಕೊಳ್ಳುವುದು ದೊಡ್ಡ ಸಮಸ್ಯೆ. ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸಕ್ಕರೆ, ಉಪ್ಪು ಹಾಗೂ ಎಣ್ಣೆಯ ಪ್ರಮಾಣ ಹೆಚ್ಚಾಗಿರೋದ್ರಿಂದ ಇವುಗಳ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗ್ಬಹುದು. ಇದರ ಜೊತೆಗೆ ಚೀಸ್,ಬಟರ್, ಫ್ಯಾಟಿ ಫಿಶ್‌ನಂತಹ ಹೈ ಕ್ಯಾಲೊರಿ ಫುಡ್ಸ್ ಕೂಡ ತೂಕವನ್ನ ಹೆಚ್ಚಿಸುತ್ವೆ. ಹೀಗಾಗಿ ಈ ಆಹಾರಗಳಿಂದ ದೂರ ಇದ್ದಷ್ಟು ಒಳ್ಳೆಯದು.
ಕಾಫಿ ಸೇವನೆ
ಇನ್ನು ಕಾಫಿ ಸೇವನೆ ಕೂಡ ಥೈರಾಯ್ಡ್ ರೋಗಿಗಳಿಗೆ ಒಳ್ಳೇದಲ್ಲ. ಅದ್ರಲ್ಲೂ ಖಾಲಿ ಹೊಟ್ಟೆಯಲ್ಲಂತೂ ಕಾಫಿ ಕುಡಿಲೇಬಾರ್ದು. ಯಾಕಂದ್ರೆ ಕಾಫಿಯಲ್ಲಿರುವ ಕೆಫೀನ್ ಅಂಶ ಥೈರಾಯ್ಡ್ ಔಷಧಿಯನ್ನ ಸಮರ್ಪಕವಾಗಿ ಕೆಲಸ ಮಾಡೋದಿಕ್ಕೆ ಬಿಡೋದಿಲ್ಲ. ಹಾಗಿದ್ರೂ ಕುಡೀಬೇಕು ಅನ್ಸಿದ್ರೆ ಥೈರಾಯ್ಡ್ ಔಷಧಿ ತಗೋಳೋ ಒಂದು ಗಂಟೆ ಮುಂಚೆ ಅಥವಾ ಔಷಧಿ ತಗೊಂಡು ಒನ್ ಅವರ್ ಆದ್ಮೇಲೆ ಕುಡೀರಿ.
ಥೈರಾಯ್ಡ್ ಸಮಸ್ಯೆ ಇರುವವರು ಇದನ್ನು ತಿನ್ನಲೇಬೇಕು
ಪಿಸ್ತಾ
ಫೈಬರ್, ಖನಿಜಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಉತ್ತಮ ಮೂಲವಾದ ಪಿಸ್ತಾ ಸೇವನೆಯಿಂದ ಥೈರಾಯ್ಡ್ ಕಂಟ್ರೋಲ್‌ನಲ್ಲಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ, ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಸಂಜೆಯ ತಿಂಡಿಯಾಗಿ ಅಥವಾ ಹಗಲಿನಲ್ಲಿ ನಿಮಗೆ ಹಸಿವಾದಾಗಲೆಲ್ಲ ನೀವು ಪಿಸ್ತಾಗಳನ್ನು ಸೇವಿಸಬಹುದು. ಮಲಬದ್ಧತೆ, ಹಸಿವಿನ ಕೊರತೆ, ನಿದ್ರಾಹೀನತೆ, ಶುಷ್ಕತೆ ಮತ್ತು ಒತ್ತಡದಂತಹ ಥೈರಾಯ್ಡ್ ರೋಗಲಕ್ಷಣಗಳಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಬ್ರೆಜಿಲ್ ನಟ್ಸ್
ಇದು ನೋಡೋದಕ್ಕೆ ಹಲಸಿನ ಬೀಜದ ಥರಾನೇ ಇರುತ್ತೆ. ದಿನಕ್ಕೆ 2-3 ಬ್ರೆಜಿಲ್ ಬೀಜಗಳನ್ನು ತಿನ್ನುವುದು ನಿಮ್ಮ ಸೆಲೆನಿಯಮ್ ಮಟ್ಟವನ್ನು ಉತ್ತಮವಾಗಿಸುತ್ತದೆ. ಥೈರಾಯ್ಡ್ ಗ್ರಂಥಿಯ ಉತ್ತಮ ಕಾರ್ಯನಿರ್ವಹಣೆಗೆ ಸೆಲೆನಿಯಮ್ ಅತ್ಯಗತ್ಯ. ಬ್ರೆಜಿಲ್ ಬೀಜಗಳನ್ನು ತಿನ್ನುವುದು ಎಲ್ಲಾ ರೀತಿಯ ಥೈರಾಯ್ಡ್ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2ರಿಂದ 3 ಬ್ರೆಜಿಲ್ ಬೀಜಗಳನ್ನು ತಿನ್ನುವುದು ಉತ್ತಮವಾಗಿದೆ. ಇದು ನಿದ್ರೆ, ಲೈಂಗಿಕ ಶಕ್ತಿ, ಮೆದುಳು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕೂದಲು ಉದುರುವಿಕೆ, ಉರಿಯೂತ, ರಕ್ತದಲ್ಲಿನ ಸಕ್ಕರೆ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಇದು ಉತ್ತಮವಾಗಿದೆ.
ಖರ್ಜೂರ
ಥೈರಾಯ್ಡ್‌ಗೆ ಉತ್ತಮವಾದ ಆಹಾರಗಳಲ್ಲಿ ಖರ್ಜೂರವೂ ಒಂದಾಗಿದೆ. ಇದು ಅಯೋಡಿನ್ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದ್ದು, ಖರ್ಜೂರವನ್ನು ತಿನ್ನುವುದು ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ . 3ರಿಂದ 4 ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ತಿನ್ನಿರಿ. ಇದು ಆಯಾಸ, ಕೂದಲು ಉದುರುವಿಕೆ, ತಲೆನೋವು, ಮಲಬದ್ಧತೆ, ಕೀಲು ನೋವು ಅಥವಾ ಸಂಧಿವಾತದಂತಹ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ.
ಥೈರಾಯ್ಡ್ ಒಂದು ಜೀವನಶೈಲಿಗೆ ಸಂಬಂಧಿಸಿ ಕಾಯಿಲೆಯಾಗಿದ್ದು ಸೂಕ್ತ ಸಮಯದಲ್ಲಿ ಔಷಧಿ ತೆಗೆದುಕೊಳ್ಳೋದು ಹಾಗೆ ರೆಗ್ಯುಲರ್ ಹೆಲ್ತ್ ಚೆಕಪ್ಸ್ ಬಹಳ ಮುಖ್ಯ.
Read Also : ಆರೋಗ್ಯ ಚೆನ್ನಾಗಿರಲು ಬೆಸ್ಟ್ ಟಿಪ್ಸ್ ; ಬೆಳಗ್ಗೆ ಇದನ್ನು ಅನುಸರಿಸಿದರೆ ಸಾಕು