ಬೆಂಗಳೂರು: ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದು, ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂಬ ಆರೋಪ ಕೇಳಿ ಬರುತ್ತಲೇ ಇವೆ. ಇನ್ನೊಂದೆಡೆ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಮನವಿ ಮಾಡುತ್ತಲೇ ಇದ್ದಾರೆ. ಆದರೂ ಸರ್ಕಾರ ಮಾತ್ರ ಮೌನ ವಹಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಹೀಗಾಗಿ ಬಿಜೆಪಿ ಶಾಸಕ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಯತ್ನಾಳ್, ರಾಜ್ಯದಲ್ಲಿ 2,80,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.

ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ:
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ: 79,694
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ: 37,572
ಒಳಾಡಳಿತ ಇಲಾಖೆ: 28,188
ಉನ್ನತ ಶಿಕ್ಷಣ: 13,599
ಕಂದಾಯ ಇಲಾಖೆ: 10,867
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 10,504
ಪಶುಸಂಗೋಪನೆ: 6,876 ಹುದ್ದೆಗಳು ಸೇರಿದಂತೆ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ. ಅಲ್ಲದೇ, ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಲ್ಲೂ ದೊಡ್ಡ ಮಟ್ಟದ ಹುದ್ದೆಗಳು ಖಾಲಿಯಿವೆ.

Share.
Leave A Reply