Site icon BosstvKannada

ನಾಳೆಯಿಂದ ಮೂರು ದಿನ ಯಾರನ್ನೂ ಭೇಟಿಯಾಗಲ್ಲ : ಎಲ್ಲಾ ಸ್ಟಡಿ ಮಾಡಿದ್ದೀನಿ, ಸದ್ಯದಲ್ಲೇ ಉತ್ತರ ಕೊಡ್ತೀನಿ – ಡಿಕೆಶಿ

ಜು. 25ಕ್ಕೆ ದೆಹಲಿಗೆ ಸಿಎಂ ಮತ್ತು ನಾನು ಭೇಟಿ ನೀಡಿ ಎಂಎಲ್​​​ಸಿ, ನಿಗಮ ಮಂಡಳಿ ನೇಮಕಾತಿ ಬಗ್ಗೆ ಚರ್ಚಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 25 ರಂದು ದೆಹಲಿಗೆ ಹೋಗ್ತಿದ್ದೇವೆ. ಸಿಎಂ ಮತ್ತು ನಾನು ಇಬ್ಬರು ಹೋಗುತ್ತಿದ್ದೇವೆ. ಅಲ್ಲೇ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ. ಎಂಎಲ್​​ಸಿ ನಾಮನಿರ್ದೇಶನ, ನಿಗಮ ಮಂಡಳಿ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.

ಧರ್ಮಸ್ಥಳ ಪ್ರಕರಣ ಸಂಬಂಧ ಎಸ್​​ಐಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ಮಾಹಿತಿ ತಿಳಿಯಬೇಕು. ಹೋಂ ಮಿನಿಸ್ಟರ್ ಹ್ಯಾಂಡಲ್ ಮಾಡ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಕೊಟ್ಟಿದ್ದಾರೆ. ಅವರು ತನಿಖೆಯನ್ನು ಮಾಡ್ತಾರೆ. ಬಿಜೆಪಿಯವರು ಏನು ಬೇಕಾದರೂ ಹೇಳಲಿ. ಕೋರ್ಟ್​ಗೆ ಯಾರೋ ಹೇಳಿಕೆ ಕೊಟ್ಟಿದ್ದರು. ಅದರ ಆಧಾರದ ಮೇಲೆ ತನಿಖೆ ಆಗ್ತಿದೆ. ಸತ್ಯಾಸತ್ಯತೆ ಏನು ಅನ್ನೋದು ಬರುತ್ತದೆ.‌ ಮೀಡಿಯಾದವರು ದೊಡ್ಡದಾಗಿ ಮಾಡ್ತಿದ್ದೀರ. ನಿಮಗೂ ಗೌರವ ಕೊಡಬೇಕಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗಿಂತ ನಿಮ್ಮದೂ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಮಾತು ಗೌರವಿಸಬೇಕು. ನಿಮ್ಮ ಹಿತವಚನವನ್ನು ಕೇಳಬೇಕಲ್ಲ ಎಂದರು.

ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸಲು ಪ್ರಯತ್ನಿಸುತ್ತಿದ್ದಾರೆ: ಇದೇ ವೇಳೆ ಸಣ್ಣ ವ್ಯಾಪಾರಿಗಳಿಗೆ ಜಿಎಸ್​​ಟಿ ನೋಟಿಸ್​ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ತಾವು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಟೀಕಿಸಿದರು.

ಕೇಂದ್ರ ಬಿಜೆಪಿ ಸರ್ಕಾರ 2019ರಲ್ಲೇ ವಾರ್ಷಿಕ 40 ಲಕ್ಷಕ್ಕೂ ವಹಿವಾಟು ಮಿತಿ ನಿಗದಿಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದನ್ನು ಪಾಲಿಸುವಂತೆ ಆದೇಶ ನೀಡಿತ್ತು. ಬಡವರಿಗೆ ಕಿರುಕುಳ ನೀಡುವುದನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು. ತರಕಾರಿ, ಹಣ್ಣು, ಎಳನೀರು, ಹೂವಿನ ವ್ಯಾಪಾರಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಈಗಾಗಲೇ 14 ಸಾವಿರ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೇ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಜಿಎಸ್​​ಟಿ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಜನರಿಗೆ ಹೇಗೆ ನೆರವಾಗಬಹುದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಸಮಿತಿಯ ಒತ್ತಡದ ಮೇರೆಗೆ ನೋಟಿಸ್ : ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಟಾರ್ಗೆಟ್ ನೀಡಿರುವುದರಿಂದ ಈ ನೋಟಿಸ್ ನೀಡಲಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ಜಿಎಸ್​​ಟಿ ಕೌನ್ಸಿಲ್ ಯಾವ ನಿಯಮ ರೂಪಿಸುತ್ತಾರೋ ಅದರಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕೇಂದ್ರದ ಸಮಿತಿಯ ಒತ್ತಡದ ಮೇರೆಗೆ ಈ ನೋಟಿಸ್ ನೀಡಲಾಗಿದೆ ಎಂದು ಡಿಕೆಶಿ ಹೇಳಿದರು.

ಜಿಬಿಎ ಅಡಿಯಲ್ಲಿ 5 ಪಾಲಿಕೆ ಮಾಡುವುದನ್ನು ಪ್ರಶ್ನಿಸಿ ಪಿಐಎಲ್ ಅರ್ಜಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರು ಬೇಕಾದರೂ ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಇದರಲ್ಲಿ ತಪ್ಪೇನಿಲ್ಲ ಇದು ಅವರ ಹಕ್ಕು. ಅದನ್ನು ಮೊಟಕುಗೊಳಿಸಲು ಆಗುವುದಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ ಐದು ಹೊಸ ಪಾಲಿಕೆಗಳನ್ನು ಮಾಡಲು ಸರ್ಕಾರ ಬದ್ಧವಾಗಿದೆ. ನಾನು ಬಿಜೆಪಿ ನಾಯಕರ ಸಭೆ ಕರೆದು ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಜಂಟಿ ಸದನ ಸಮಿತಿ ರಚಿಸಿ ಚರ್ಚೆ ಮಾಡಲಾಗಿದೆ. ಈಗಲೂ ಅವರು ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಅವರು ರಾಜಕೀಯ ಕಾರಣಕ್ಕೆ ಧ್ವನಿ ಎತ್ತುತ್ತಿದ್ದಾರೆ. ಬೆಂಗಳೂರಿನ ಹಿತಕ್ಕಾಗಿ ಐದು ಪಾಲಿಕೆ ಮಾಡಲು ಮುಂದಾಗಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ಮಾಧ್ಯಮಗೋಷ್ಟಿ ಕರೆದು ಎ ಖಾತಾ, ಬಿ ಖಾತಾ ವಿಚಾರ, ಇ-ಖಾತಾ ಅಭಿಯಾನ, ತೆರಿಗೆ ಹಾಗೂ ಪಾಲಿಕೆ ವಿಚಾರವಾಗಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಮುಂದಿನ ಮೂರು ದಿನಗಳ ಕಾಲ ಡಿಸಿಎಂ ಅಲಭ್ಯ : ಅನ್ಯಕಾರ್ಯ ನಿಮಿತ್ತ ನಾಳೆಯಿಂದ (ಮಂಗಳವಾರದಿಂದ) ಮೂರು ದಿನಗಳ ಕಾಲ ತಾವು ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ. ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ತಾವು ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Exit mobile version