ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ Santosh Lad ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಚಾರಿ ಆರೋಗ್ಯ ಘಟಕಗಳಿಗೆ ಧಾರವಾಡದ ಸರ್ಕಿಟ್ ಹೌಸ್‌ನಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಆರೋಗ್ಯ, ಸುರಕ್ಷತೆ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಪ್ರತಿ ಜಿಲ್ಲೆಗೆ ಸಂಚಾರಿ ಆರೋಗ್ಯ ಘಟಕಗಳನ್ನು ನೀಡಲಾಗಿದೆ. ನೋಂದಾಯಿತ ಕಾರ್ಮಿಕರು ಮತ್ತು ಅವರ ಮಕ್ಕಳು ಆರೋಗ್ಯವಾಗಿ ಇರಬೇಕೆಂಬ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದರು.

ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ಹೋಗಿ, ಜ್ವರ, ಕೆಮ್ಮು, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ ಸೇರಿದಂತೆ ಸುಮಾರು 20 ರೀತಿಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಕುರಿತ ಅವರ ದಾಖಲೆಗಳು ಆನ್ ಲೈನ್ ಮೂಲಕ ನೇರವಾಗಿ ಕಾರ್ಮಿಕ ಇಲಾಖೆಯ ಮುಖ್ಯ ಕಚೇರಿಗೆ ತಲುಪುತ್ತದೆ. ಕಾರ್ಮಿಕರ ಅಧಿಕೃತ ದಾಖಲೆಗಳನ್ನು ಅಂತರ್ಜಾಲದ ಮೂಲಕ ದೃಢ ಪಡಿಸಿಕೊಳ್ಳಲಾಗುತ್ತದೆ ಎಂದರು.
ಕಾರ್ಯಾದೇಶ ಪಡೆದಿರುವ ಸಂಸ್ಥೆಗಳು ಪ್ರತಿ ತಿಂಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಸಂಚರಿಸುವ ಮಾರ್ಗ, ಸ್ಥಳದ ಬಗ್ಗೆ ರೂಟ್ ಮ್ಯಾಪ್ ಸಿದ್ಧಪಡಿಸಿ, ಖಾತರಿಪಡಿಸಿಕೊಳ್ಳಬೇಕು. ಪ್ರತಿ ತಿಂಗಳ ರೂಟ್ ಮ್ಯಾಪ್‍ಗಳನ್ನು ಕನಿಷ್ಠ 15 ದಿನಗಳ ಮುಂಚಿತವಾಗಿ ಸಿದ್ದಪಡಿಸಿ, ವಾಹನಗಳು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಚಾರ ಮಾಡಬೇಕು ಎಂದರು.
ರೂಟ್ ಮ್ಯಾಪ್ ತಯಾರಿಸುವಾಗ ಸಂಸ್ಥೆಯು ಎಲ್ಲಾ ತಾಲ್ಲೂಕುಗಳು ಮತ್ತು ತಾಲ್ಲೂಕಿನ ಎಲ್ಲಾ ಪ್ರದೇಶಗಳು (ಗ್ರಾಮ, ವಾರ್ಡ್, ಹೋಬಳಿ) ಒಳಪಡುವ ರೀತಿ ಕ್ರಮವಹಿಸಿ ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಒಳಪಡುವ ರೀತಿಯಲ್ಲಿ ರೂಟ್ ಮ್ಯಾಪ್‍ನ್ನು ಸಿದ್ದಪಡಿಸುತ್ತಾರೆ. ರೂಟ್ ಮ್ಯಾಪ್‍ನ್ನು ಸಿದ್ದಪಡಿಸುವಾಗ ಪ್ರಯಾಣದ ಸಮಯವು ಅತ್ಯಂತ ಕಡಿಮೆ ಇರುವಂತೆ ಹಾಗೂ ನಿಗದಿತ ಸ್ಥಳದಲ್ಲಿ ಸಂಚಾರಿ ಆರೋಗ್ಯ ಘಟಕಗಳು ಕನಿಷ್ಠ 04 ಗಂಟೆಗಳಾ ದರೂ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
Also Read: Madenoor Manu ಬಿಗ್ ಶಾಕ್ : ಫಿಲ್ಮ್ ಚೇಂಬರ್ ನಿಂದ ಮಹತ್ವದ ನಿರ್ಧಾರ..!
ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಓ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ. ಬ್ಯಾಕೋಡ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ ಹಾಗೂ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಸಚೀನ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಇತರರು ಉಪಸ್ಥಿತರಿದ್ದರು.