BosstvKannada

ನಿರ್ದೇಶಕ ಕಮಲ್‌ ರಾಜ್‌ ರಚಿಸಿದ ಪಂಚ ಕೃತಿ ಲೋಕಾರ್ಪಣೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಮತ್ತು ವಿತರಕರಾಗಿ ಗುರುತಿಸಿಕೊಂಡಿರುವ ಕಮಲ್‌ ರಾಜ್‌ (ಕಲೀಂ ಪಾಷ) ಇದೀಗ ಸದಭಿರುಚಿಯ ಬರಹಗಾರರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಲ್ಲಿಯವರೆಗೆ ತಮ್ಮ ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಗಳನ್ನು ಬರೆದು ಸೈ ಎನಿಸಿಕೊಂಡಿದ್ದ ಕಮಲ್‌ ರಾಜ್‌, ಇದೀಗ ತಾವು ರಚಿಸಿರುವ ಐದು ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ.

ʼದೇವರ ಯುನಿವರ್ಸಲ್‌ ಬಿಸಿನೆಸ್‌ ಸ್ಕೂಲ್‌ʼ, ʼಮಾರ್ಕೆಟಿಂಗ್‌ ಐಕಾನ್ಸ್‌ ಆಫ್‌ ಇಂಡಿಯಾ ಎಸ್‌ಆರ್‌ಕೆ ಅಂಡ್‌ ಮೋದಿʼ, ʼಟು ಮೈ ಕಿಡ್ಸ್‌ ಇಮಾದ್‌ ಅಂಡ್‌ ಆಲಿಯಾʼ, ʼಟಿಪ್ಪು ಸುಲ್ತಾನ್‌ʼ ಮತ್ತು ʼ1000 ಶಾಯರಿಯಾನ್‌ ಜಸ್ಬಾತ್‌ ದಿಲ್‌ ಸೇʼ ಎಂಬ ಹೆಸರಿನ ಐದು ಕೃತಿಗಳು ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿದ್ದು, ಯುವನಟ ವಿರಾಟ್‌, ಪ್ರಕಾಶಕ ಮತ್ತು ನಿರ್ಮಾಪಕ ವಿ. ಲಕ್ಷ್ಮೀಕಾಂತ್‌, ನಟರಾದ ರಕ್ಷಕ್‌, ಹುಚ್ಚ ವೆಂಕಟ್‌ ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಹಲವು ಗಣ್ಯರು ಹಾಜರಿದ್ದು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ನೈಸರ್ಗಿಕ ವ್ಯವಹಾರ, ಮಾರುಕಟ್ಟೆ ತಂತ್ರಗಳು, ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯ, ಐತಿಹಾಸಿಕ ವ್ಯಕ್ತಿಗಳ ಸಾಧನೆಗಳು ಮತ್ತು ಭಾವ ಲಹರಿ ಗೀತೆಗಳ ಕುರಿತಾಗಿ ಈ ಕೃತಿಗಳನ್ನು ರಚಿಸಲಾಗಿದ್ದು, ಇಂಗ್ಲಿಷ್‌ ಮತ್ತು ಕನ್ನಡ ಸೇರಿದಂತೆ ಎರಡೂ ಭಾಷೆಗಳಲ್ಲೂ ಈ ಕೃತಿಗಳು ಲಭ್ಯವಿದೆ.

ತಮ್ಮ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಮಲ್‌ ರಾಜ್‌, ʼಇಲ್ಲಿಯವರೆಗೆ ನಮ್ಮ ಸಿನಿಮಾಕ್ಕೆ ಮಾತ್ರ ಹೆಚ್ಚಾಗಿ ಬರೆಯುತ್ತಿದ್ದೆ. ಇದೀಗ ಸಿನಿಮಾದ ಜೊತೆಗೆ ಅದರ ಹೊರತಾಗಿರುವ ಮತ್ತು ಎಲ್ಲರೂ ತಿಳಿದುಕೊಳ್ಳಲೇ ಬೇಕಾಗಿರುವ ಒಂದಷ್ಟು ವಿಷಯಗಳನ್ನು ಈ ಕೃತಿಗಳ ಮೂಲಕ ಜನರ ಮುಂದಿಡುತ್ತಿದ್ದೇನೆ. ಈ ಐದು ಕೃತಿಗಳು ಕೂಡ ಐದು ವಿಭಿನ್ನವಾದ ವಿಷಯಗಳನ್ನು ಒಳಗೊಂಡಿದೆ. ಪ್ರಕೃತಿ ತನ್ನ ದೈನಂದಿನ ಚಟುವಟಿಕೆಗಳು ಮತ್ತು ವ್ಯವಹಾರವನ್ನು ಹೇಗೆ ಮಾಡುತ್ತದೆ? ಅದು ನಮಗೆ ಹೇಗೆ ಪಾಠವಾಗುತ್ತದೆ ಎಂಬುದನ್ನು ʼದೇವರ ಯುನಿವರ್ಸಲ್‌ ಬಿಸಿನೆಸ್‌ ಸ್ಕೂಲ್‌ʼ ಕೃತಿಯಲ್ಲಿ ಹೇಳಿದ್ದೇನೆ. ಇಂದಿನ ತಲೆಮಾರಿಗೆ ನಟರಾದ ಶಾರೂಖ್‌ ಖಾನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾರುಕಟ್ಟೆ ವಿಷಯದಲ್ಲಿ ಹೇಗೆ ಮಾದರಿಯಾಗುತ್ತಾರೆ? ಎಂಬುದನ್ನು ʼಮಾರ್ಕೆಟಿಂಗ್‌ ಐಕಾನ್ಸ್‌ ಆಫ್‌ ಇಂಡಿಯಾ ಎಸ್‌ಆರ್‌ಕೆ ಅಂಡ್‌ ಮೋದಿʼ ಪುಸ್ತಕದಲ್ಲಿ ಬರೆದಿದ್ದೇನೆ. ಈ ಎರಡೂ ಕೃತಿಗಳೂ ಇಂದಿನ ಕಾರ್ಪೊರೇಟ್ ಮತ್ತು ಮಾರ್ಕೆಟಿಂಗ್‌ ವ್ಯವಸ್ಥೆಗೆ ಪೂರಕವಾಗಿದೆʼ ಎಂದರು.

ʼಇದಲ್ಲದೆ ʼಟು ಮೈ ಕಿಡ್ಸ್‌ ಇಮಾದ್‌ ಅಂಡ್‌ ಆಲಿಯಾʼ ಮತ್ತು ʼ1000 ಶಾಯರಿಯಾನ್‌ ಜಸ್ಬಾತ್‌ ದಿಲ್‌ ಸೇʼ ಎಂಬ ಹೆಸರಿನ ಕೃತಿಗಳು ಭಾವನಾತ್ಮಕ ಬರಹಗಳಾಗಿದ್ದು, ʼಟಿಪ್ಪು ಸುಲ್ತಾನ್‌ʼ ಒಂದು ಐತಿಹಾಸಿಕ ಪಾತ್ರದ ಸಕಾರಾತ್ಮಕ ಅಂಶಗಳ ವಿವರಣೆಯನ್ನು ಓದುಗರ ಮುಂದಿಡುವಂಥದ್ದುʼ ಎಂದು ಐದು ಕೃತಿಗಳ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟರು. ಇನ್ನು ಕಮಲ್‌ ರಾಜ್‌ ರಚಿಸಿರುವ ಈ ಎಲ್ಲಾ ಕೃತಿಗಳು ಕರ್ನಾಟಕದಾದ್ಯಂತ ಎಲ್ಲಾ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್‌ನಲ್ಲೂ ಲಭ್ಯವಿದೆ ಎಂದು ಪ್ರಕಾಶಕರು ತಿಳಿಸಿದರು.

Exit mobile version