ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಇಂದಿನಿಂದ ಎಸ್‌ಐಟಿ ಅಸಲಿ ಆಟ ಶುರುವಾಗಲಿದೆ. ಇವತ್ತಿಂದ ಧರ್ಮಸ್ಥಳ ಕೇಸ್‌ನ ತನಿಖೆ ಚುರುಕುಗೊಳ್ಳಲಿದ್ದು, ಎಸ್‌ಐಟಿಗೆ ದೊಡ್ಡ ಸವಾಲಾಗಿದೆ.. ಇಂದು ಎಸ್‌ಐಟಿ ತಂಡ ಅಖಾಡಕ್ಕೀಳಿದಿದ್ದು, ಧರ್ಮಸ್ಥಳ ಕೇಸ್‌ನ ಅಸಲಿ ರಹಸ್ಯ ಬೇಧಿಸಲಿದೆ. ಎಸ್‌ಐಟಿ ತಂಡದಿಂದ ಕೂಲಂಕುಷ ತನಿಖೆ ನಡೆಯಲಿದ್ದು, ಸತ್ಯಾ-ಸತ್ಯತೆ ಬಹಿರಂಗವಾಗಲಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.
ಇನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಮಗ್ರ ತನಿಖೆಗಾಗಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ಹೆಚ್ಚುವರಿಯಾಗಿ 20 ಅಧಿಕಾರಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಆದೇಶಿಸಿದ್ದಾರೆ.
ರಾಜ್ಯ ಸರ್ಕಾರ ಶನಿವಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿ ಆದೇಶಿಸಿತ್ತು. ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ. ಪ್ರಣವ ಮೊಹಾಂತಿ ಅವರ ನೇತೃತ್ವದ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾನಿರೀಕ್ಷಕ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಉಪ ಪೊಲೀಸ್ ಆಯುಕ್ತ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ಇವರೊಂದಿಗೆ ಮಂಗಳೂರು ಡಿಸಿಆರ್‌ಇ ಎಸ್ಪಿ ಸಿ.ಎ.ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿಎಸ್‌ಪಿ, ಎ.ಸಿ. ಲೋಕೇಶ್ ಸೇರಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
