ಬೆಂಗಳೂರು : ಸ್ಯಾಂಡಲ್‌ವುಡ್‌ನ ʼಡಿ ಬಾಸ್ʼ ಅಂತಲೇ ಖ್ಯಾತಿ ಪಡೆದಿರುವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರ ಇಂದು (ಡಿ.11) ಬಿಡುಗಡೆಯಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಸಹ ಗಮನ ಸೆಳೆಯುತ್ತಿದೆ. ನಟ ದರ್ಶನ್ ಪ್ರಸ್ತುತ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಹೊರತಾಗಿಯೂ, ಈ ಚಿತ್ರ ತೆರೆ ಕಂಡಿದ್ದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಅತೀದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ.
ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಸ್ವತಃ ಅಭಿಮಾನಿಗಳೇ ಪ್ರಚಾರಕರಾಗಿ ತೊಡಗಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಿಂದಾಗಿ ಅವರ ಅನುಪಸ್ಥಿತಿ ದಿ ಡೆವಿಲ್ ಚಿತ್ರದ ಪ್ರಚಾರದ ಮೇಲೆ ಯಾವುದೇ ಪರಿಣಾಮ ಬೀರದಂತೆ ಚಿತ್ರತಂಡ ಹಾಗೂ ಅಭಿಮಾನಿಗಳು ಮುತುವರ್ಜಿ ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಟ್ರೇಲರ್ ವೀಕ್ಷಣೆ ಹಾಗೂ ಹಾಡುಗಳ ಮೂಲಕವೇ ಚಿತ್ರಕ್ಕೆ ಅಪಾರ ಪ್ರಮಾಣದ ಜನಪ್ರಿಯತೆ ಹರಿದು ಬಂದಿತ್ತು. ಡಿಸೆಂಬರ್ 6 ರಂದು ತೆರೆದ ಮುಂಗಡ ಬುಕಿಂಗ್‌ನಲ್ಲಿ 24 ಗಂಟೆಗಳಲ್ಲೇ ಲಕ್ಷಾಂತರ ಜನರು ಟಿಕೇಟ್ ಖರೀದಿಸಿ ದಾಖಲೆ ಸಹ ಬರೆದಿದ್ದರು. ಇನ್ನು ಆಫ್‌ಲೈನ್‌ನಲ್ಲಿ 30,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಮಾಹಿತಿ ಕೂಡ ತಿಳಿದು ಬಂದಿದೆ. ಬಿಡುಗಡೆಗೂ ಮುನ್ನವೇ ಸುಮಾರು ಎರಡು ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು, ಮತ್ತೊಮ್ಮೆ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಸಾಬೀತು ಪಡಿಸಲು ʼದಿ ಡೆವಿಲ್ʼ ಸಜ್ಜಾಗಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಥಿಯೇಟರ್‌ಗಳು ಹೌಸ್‌ಫುಲ್ ಆಗುವ ನಿರೀಕ್ಷೆಯನ್ನು ಪ್ರದರ್ಶಕರು ವ್ಯಕ್ತಪಡಿಸಿದ್ದಾರೆ.

ಇನ್ನು ಮಿಲನ ಪ್ರಕಾಶ್ ನಿರ್ದೇಶನದ ಮತ್ತು ಶ್ರೀ ಜೈಮಾತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ʼದಿ ಡೆವಿಲ್ʼ ಚಿತ್ರದಲ್ಲಿ ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ರೋಜರ್ ನಾರಾಯಣ್, ಶೋಭರಾಜ್ ಮತ್ತು ಶ್ರೀನಿವಾಸ್ ಪ್ರಭು ಸೇರಿದಂತೆ ಹಲವರು ನಟಿಸಿದ್ದಾರೆ. ಬಿ.ಅಜನೀಶ್ ಲೋಕನಾಥ್ ಅವರು ʼದಿ ಡೆವಿಲ್ʼ ಚಿತ್ರಕ್ಕೆ ಸಂಗೀತ ರಚಿಸಿದ್ದು, ಸುಧಾಕರ್ ಎಸ್.ರಾಜ್ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಕರ್ನಾಟಕದ ಸುಮಾರು ಶೇ.90 ರಷ್ಟು ಸಿಂಗಲ್ ಸ್ಕ್ರೀನ್‌ಗಳಲ್ಲಿ ಈ ಚಿತ್ರ ಆರ್ಭಟಿಸುವ ನಿರೀಕ್ಷೆಯಿದೆ. ಕೊಲೆ ಪ್ರಕರಣದ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರ ಸಿನಿಮಾ ಬದುಕಿಗೆ ʼದಿ ಡೆವಿಲ್ʼ ಟರ್ನಿಂಗ್ ಪಾಯಿಂಟ್ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.