ಬೆಂಗಳೂರು, ಮಾ.18 : ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ಶುಭಕೋರುವ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಹಾಸ್ಯದ ಧಾಟಿಯಲ್ಲಿ ವ್ಯಂಗ್ಯವಾಡುವ ಮೂಲಕ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು.
ರಾಜ್ಯಸಭೆಯಲ್ಲಿ ಬುಧವಾರ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ಹಾಸ್ಯಮಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ತಮ್ಮ ವಿದಾಯ ಭಾಷಣದಲ್ಲಿ ದೇವೇಗೌಡರೊಂದಿಗಿನ ಹಳೆಯ ಒಡನಾಟವನ್ನು ಸ್ಮರಿಸಿದ ಮಲ್ಲಿಕಾರ್ಜುನ ಖರ್ಗೆ, ನನಗೆ 54 ವರ್ಷಗಳಿಂದ ಗೌಡರ ಪರಿಚಯ ಇದೆ. ಅವರ ಜೊತೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಆಮೇಲೆ ಏನಾಯಿತೋ ಗೊತ್ತಿಲ್ಲ… ಅವರು ಪ್ರೀತಿ ಮಾಡಿದ್ದು ನಮ್ಮನ್ನು (ಕಾಂಗ್ರೆಸ್), ಆದರೆ ಮದುವೆಯಾಗಿದ್ದು ಮಾತ್ರ ಮೋದಿ ಸಾಹೇಬರ ಜೊತೆ ಎಂದು ಹಾಸ್ಯಭರೀತವಾಗಿಯೇ ಮಾರ್ಮಿಕವಾಗಿ ಟೀಕಿಸಿದ್ದಾರೆ. ಖರ್ಗೆ ಅವರ ಈ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಸಂಸದರು ಮುಗುಳ್ನಗೆ ಬೀರಿದ್ದಾರೆ.
ಸಾರ್ವಜನಿಕ ಸೇವೆಯ ಬದ್ಧತೆಯ ಬಗ್ಗೆ ಮಾತನಾಡಿದ ಖರ್ಗೆ, ರಾಜಕಾರಣದಲ್ಲಿ ಇರುವವರು ಎಂದಿಗೂ ದಣಿಯುವುದಿಲ್ಲ ಅಥವಾ ನಿವೃತ್ತರಾಗುವುದಿಲ್ಲ ಎಂದರು. ಖರ್ಗೆ ಅವರ ಪ್ರಸ್ತುತ ಅವಧಿ ಮುಕ್ತಾಯವಾಗುತ್ತಿದ್ದರೂ, ಅವರು ಮತ್ತೆ ಸದನಕ್ಕೆ ಮರಳುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿ ಮಾತು :
ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದಿಲ್ಲ. ನಿವೃತ್ತ ಸದಸ್ಯರಿಗೆ ಭವಿಷ್ಯ ಕಾಯುತ್ತಿದೆ ಎನ್ನುತ್ತಾ, ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರಂತಹ ಹಿರಿಯ ನಾಯಕರಿಂದ ಸಂಸದೀಯ ಅನುಭವವನ್ನು ಕಲಿಯುವಂತೆ ನೂತನ ಸದಸ್ಯರಿಗೆ ಕರೆ ನೀಡಿದರು.
ಇದೇ ವೇಳೆ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರ ಹಾಸ್ಯಪ್ರಜ್ಞೆಯನ್ನು ಪ್ರಧಾನಿ ಶ್ಲಾಘಿಸಿದರು. ಪ್ರಿಯಾಂಕಾ ಚತುರ್ವೇದಿ, ತಿರುಚಿ ಶಿವ ಮತ್ತು ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಒಟ್ಟು 37 ಸದಸ್ಯರು ಈ ಅವಧಿಯಲ್ಲಿ ನಿವೃತ್ತರಾಗುತ್ತಿದ್ದಾರೆ.