ತಿರುವನಂತಪುರಂ: ಶ್ರೀಲಂಕಾ(INDW vs SLW) ವಿರುದ್ಧ ನಡೆದ 5ನೇ ಟಿ20 ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ(Deepti Sharma) ಐತಿಹಾಸಿಕ ದಾಖಲೆ ಬರೆದಿದ್ದಾರೆ.
ದೀಪ್ತಿ ಶರ್ಮಾ ಅವರು ಒಂದು ವಿಕೆಟ್ ಪಡೆಯುವ ಮೂಲಕ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ದೀಪ್ತಿ ಶರ್ಮಾ ತಮ್ಮ ಚೊಚ್ಚಲ ಟಿ20 ಪಂದ್ಯವನ್ನು 2016ರಲ್ಲಿ ಆಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು 133 ಟಿ20 ಪಂದ್ಯ ಆಡಿದ್ದಾರೆ. ಈ ಪಂದ್ಯಗಳಲ್ಲಿ ಇಲ್ಲಿಯವರೆಗೆ ಒಟ್ಟು 152 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅವರು ಆಸ್ಟ್ರೇಲಿಯಾದ ವೇಗಿ ಮೇಘನ್ ಶುಟ್ ಅವರ ದಾಖಲೆ ಹಿಂದಿಕ್ಕಿದ್ದಾರೆ. ಶುಟ್ 151 ವಿಕೆಟ್ ಪಡೆದಿದ್ದಾರೆ. ಅವರ ನಂತರ ಮೂರನೇ ಸ್ಥಾನದಲ್ಲಿ ನಿದಾ ದಾರ್ 144 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಅಷ್ಟೇ ಅಲ್ಲ, ಪುರುಷ ಅಥವಾ ಮಹಿಳಾ ಆಟಗಾರ್ತಿಯರ ಪೈಕಿ ಟಿ20ಐ ಸ್ವರೂಪದಲ್ಲಿ 100 ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 150ಕ್ಕೂ ಅಧಿಕ ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ದೀಪ್ತಿ ಪಾತ್ರರಾಗಿದ್ದಾರೆ. ಏಕದಿನ ಮತ್ತು ಟಿ20ಐ ಎರಡರಲ್ಲೂ 150 ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಮಹಿಳೆ ಎಂಬ ದಾಖಲೆಯೂ ದೀಪ್ತಿ ಹೆಸರಿನಲ್ಲಿದೆ.
ಅಲ್ಲದೇ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಜೂಲನ್ ಗೋಸ್ವಾಮಿ ಅವರ ದಾಖಲೆ ಮುರಿಯುವ ಸನಿಹದಲ್ಲೂ ದೀಪ್ತಿ ಇದ್ದಾರೆ. ಈಗ ದೀಪ್ತಿ 334 ವಿಕೆಟ್ಗಳನ್ನು (ಟೆಸ್ಟ್ನಲ್ಲಿ 20, ಏಕದಿನಗಳಲ್ಲಿ 162, ಟಿ20ಐಗಳಲ್ಲಿ 152) ಹೊಂದಿದ್ದಾರೆ. ಗೋಸ್ವಾಮಿ 355 ವಿಕೆಟ್ಗಳೊಂದಿಗೆ (ಟೆಸ್ಟ್ನಲ್ಲಿ 44, ಏಕದಿನಗಳಲ್ಲಿ 255, ಟಿ20ಐಗಳಲ್ಲಿ 56) ಮುಂಚೂಣಿಯಲ್ಲಿದ್ದಾರೆ. ಇಂಗ್ಲೆಂಡ್ನ ಕ್ಯಾಥರೀನ್ ಸ್ಕಿವರ್-ಬ್ರಂಟ್ 335 ವಿಕೆಟ್ಗಳೊಂದಿಗೆ ದೀಪ್ತಿಗಿಂತ ಮುಂದಿದ್ದಾರೆ.
ಮಹಿಳಾ ಟಿ20 ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದವರು
ದೀಪ್ತಿ ಶರ್ಮಾ-152
ಮೇಘನ್ ಶಟ್-151
ನಿದಾ ದಾರ್-144
ಹೆನ್ರಿಯೆಟ್ ಇಶಿಮ್ವೆ-144
ಸೋಫಿ ಎಕ್ಲೆಸ್ಟೋನ್- 142

