ಬೆಂಗಳೂರು: ಸಾಲದ ಕಿರುಕುಳಕ್ಕೆ ಬೇಸತ್ತು ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಅಜ್ಜಿಗೆ ಹೃದಯಾಘಾತವಾಗಿರುವ ಘಟನೆ ನಡೆದಿದೆ.
ಈ ಘಟನೆ ಸಿಲಿಕಾನ್ ಸಿಟಿ (Bengaluru) ಕೋರಮಂಗಲ (Koramangala) ಬಳಿಯ ತಾವರೆಕೆರೆ (Tavarekere) ಹತ್ತಿರ ನಡೆದಿದೆ. ತಮಿಳುನಾಡಿನ (Tamilnadu) ಧರ್ಮಪುರಿ ಮೂಲದ ಸುಧಾ (38), ಮಗ ಮೋನಿಷ್ (14) ಸಾಲದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡ ಅಜ್ಜಿ ಮುದ್ದಮ್ಮ(68) ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಸುಧಾ, ಬಿರಿಯಾನಿ ಸೆಂಟರ್, ಚಿಪ್ಸ್ ಶಾಪ್ ಹಾಗೂ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು ಎನ್ನಲಾಗಿದೆ. ಮೋನಿಷ್ 7ನೇ ತರಗತಿಯಲ್ಲಿ ಓದುತ್ತಿದ್ದ. ವ್ಯಾಪಾರಕ್ಕೆ ಕೈ ಹಾಕಿದ್ದ ಸುಧಾ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಹೀಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಂತೆ. ವ್ಯಾಪಾರ ನಷ್ಟದ ಹಾದಿ ಹಿಡಿಯುತ್ತಿದ್ದಂತೆ ಇತ್ತೀಚೆಗೆ ಅಂಗಡಿಯನ್ನು ಬೇರೆಯವರಿಗೆ ನಡೆಸಲು ಕೊಟ್ಟಿದ್ದರು. ಆದರೆ, ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಮೂರು ತಿಂಗಳಾದರೂ ಹಣ ನೀಡಿಲ್ಲ ಎನ್ನಲಾಗಿದೆ. ಇದರಿಂದಾಗಿ ಸುಧಾಗೆ ಮತ್ತಷ್ಟು ಸಾಲಗಾರರ ಕಿರುಕುಳವಾಗಿದೆ.
ಆದರೆ, ಏಕಾಏಕಿ ಸೋಮವಾರ ಬೆಳಗ್ಗೆ ಸುಧಾ, ಮಗನಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಮಾಡಿಕೊಂಡಿದ್ದಾರೆ. ಮಗಳು ಹಾಗೂ ಮೊಮ್ಮಗ ವಿಷ ಸೇವಿಸಿ ನರಳಾಡುವುದನ್ನು ಕಂಡ ತಾಯಿ, ತಮ್ಮ ಮತ್ತೋರ್ವ ಮಗಳಿಗೆ ಹೇಳಿದ್ದಾರೆ. ಅವರು ಬೊಮ್ಮಸಂದ್ರದಿಂದ ಬರುವಷ್ಟರಲ್ಲಿ ತಾಯಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇನ್ನೊಂದೆಡೆ ತಾಯಿ- ಮಗ ಕೂಡ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

