ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ಬಿಡದೇ ಬೀಸುತ್ತಿದೆ. ಸ್ವಪಕ್ಷದವರೇ ಸಿಎಂ ಬದಲಾಗ್ತಾರೆ ಅನ್ನೋ ಹೇಳಿಕೆಗಳನ್ನ ಪದೆಪದೇ ನೀಡ್ತಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. ಅಷ್ಟೇಅಲ್ಲಾ ಸಿಎಂ ಬದಲಾಗ್ತಾರೆ ಅನ್ನೋ ಹೇಳಿಕೆಗಳು ವಿಪಕ್ಷಗಳಿಗೆ ಅಸ್ತ್ರವಾಗಿದೆ. ಅದಕ್ಕೆ ಪೂರಕವಾಗಿ ಮತ್ತೊಬ್ಬ ಕಾಂಗ್ರೆಸ್ ಶಾಸಕ ಮುಂದಿನ ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಹೇಳಿಕೆ ನೀಡೋ ಮೂಲಕ ರಾಜಕೀಯ ಕ್ರಾಂತಿಗೆ ಪುಷ್ಠಿ ನೀಡಿದ್ದಾರೆ.
ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಹಿರಿಯ ನಾಯಕರು ತಾಕೀತು ಮಾಡಿದ ಬಳಿಕ ತಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿದ ರಾಜಣ್ಣ ಕ್ರಾಂತಿ ಕಾಂಗ್ರೆಸ್‌ನಲ್ಲೇ ಯಾಕೆ ಆಗಬೇಕು. ಬಿಜೆಪಿಯಲ್ಲಿ ನಡೆಯಬಾರದೇ, ಕೇಂದ್ರ ಸರ್ಕಾರದಲ್ಲಿ ಆಗಬಾರದೇ ಎಂದು ಅಂತಾ ತಮ್ಮ ಹೇಳಿಕೆಯನ್ನ ತಿರುಚಿದರು.
ರಾಜಕೀಯ ಕ್ರಾಂತಿ ಕುರಿತು ರಾಜಣ್ಣ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಪಕ್ಕದಲ್ಲಿರಿಸಿಕೊಂಡು ಹೇಳಿದ್ದರು. ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ರಾಜಣ್ಣ ಹೇಳಿಕೆಗೆ ಪರವಾಗಿ ಬ್ಯಾಟ್ ಬೀಸಿದರು.
ಇನ್ನು ಈ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಪರಮಾಪ್ತರಾಗಿರುವ ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮತ್ತೊಂದು ಸ್ಫೋಟಕ ಹೇಳಿಕೆಯನ್ನು ಹೊರ ಹಾಕಿದ್ದು, ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡಿದ್ದಾರೆ. ಮುಂದಿನ ಎರಡು ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ. ನಾನು ಸುತ್ತು ಬಳಸಿ ಮಾತನಾಡುವುದಿಲ್ಲ. ನೇರವಾಗಿಯೇ ಹೇಳುತ್ತಿದ್ದೇನೆ. ಅವರೆಲ್ಲಾ ಹೇಳುವಂತೆ ರಾಜಕೀಯ ಕ್ರಾಂತಿಯಾಗುತ್ತದೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರವಹಿಸಿಕೊಳ್ಳಲಿದ್ದಾರೆ ಅಂತಾ ಸ್ಪೋಟಕ ಹೇಳಿಕೆ ನೀಡಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನ ಗಳಿಸಿತ್ತು. ನಮ ಸಂಖ್ಯಾಬಲ ಎಷ್ಟಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಡಿ.ಕೆ.ಶಿವಕುಮಾರ್ ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಿದರು. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆಯಂತಹ ಕಾರ್ಯಕ್ರಮಗಳು ಇತಿಹಾಸದಲ್ಲೇ ನಡೆದಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಆರೋಗ್ಯಹಸ್ತದಂತಹ ಅಪರೂಪದ ಕಾರ್ಯಕ್ರಮ ಡಿ.ಕೆ.ಶಿವಕುಮಾರ್ ಕೊಡುಗೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಶ್ರಮ, ರೂಪುರೇಷೆ, ಹೋರಾಟ, ಬೆವರು, ಆಸಕ್ತಿ ಎಲ್ಲವೂ ಕಣ್ಣೆದುರಿಗೆ ಇದೆ. ಅದು ಹೈಕಮಾಂಡ್ ಗಮನಕ್ಕೂ ಇದೆ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಕ್ರಾಂತಿಗೆ ಅವರು ಹೇಳುತ್ತಿರುವ ದಿನಾಂಕವೇ ಇದು. ಹೈಕಮಾಂಡ್ ಈ ವರ್ಷವೇ ನಿರ್ಧಾರ ತೆಗೆದುಕೊಳ್ಳಲಿದೆ. ಎರಡು ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ಗೆ ಅವಕಾಶ ಸಿಗುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ , ಮುಖ್ಯಮಂತ್ರಿ ಬದಲಾಗುವುದಿಲ್ಲ ಎಂದು ಹೇಳಿರುವುದಕ್ಕೆ ತಿರುಗೇಟು ನೀಡಿರುವ ಇಕ್ಬಾಲ್ ಹುಸೇನ್, ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಆಯ್ಕೆಯ ವೇಳೆಯ ವೇಳೆ ದೆಹಲಿಯ ಬೆಳವಣಿಗೆಗಳು ನಮಗೆ ಗೊತ್ತಿವೆ. ನಾವು ದೆಹಲಿಯಲ್ಲೇ ಇದ್ದೆವು. ಆಗ ನಡೆದ ಚರ್ಚೆಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಮಾಡುತ್ತಾರೆ. ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

