ಕೊಪ್ಪಳ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ (Cylinder Explosion) ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆಯೇ ನೆಲಸಮವಾಗಿದೆ.
ಈ ಘಟನೆ ಗಂಗಾವತಿ (Gangavati) ತಾಲೂಕಿನ ಹೆಬ್ಬಾಳ ಎಂಬಲ್ಲಿ ನಡೆದಿದೆ. ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಗಾಯಗೊಂಡ ದುರ್ದೈವಿಗಳು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಹೆಬ್ಬಾಳ್ ಗ್ರಾಮದ ಹುಸೇನಮ್ಮ ಎಂಬುವವರು ಇತ್ತೀಚೆಗಷ್ಟೇ ಸಿಲಿಂಡರ್ ಖರೀದಿಸಿದ್ದರು. ಅದನ್ನು ಆನ್ ಮಾಡುವಾಗ ಅದು ಸ್ಫೋಟಗೊಂಡಿದೆ. ಇಡೀ ಮನೆ ನೆಲಸಮವಾಗಿದ್ದು, ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ, ಅಕ್ಕಪಕ್ಕದ ಮನೆಯವರೂ ಗಾಯಗೊಂಡಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

