ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಟಫ್ ರೂಲ್ಸ್ ಗೆ ಸಿದ್ಧತೆ ನಡೆದಿದೆ.
ಲಕ್ಷಾಂತರ ಮಂದಿ ಸೇರುವ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಿರುವ ನಗರ ಪೊಲೀಸರು, ಎಂ.ಜಿ. ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ 22 ಪರಿವೀಕ್ಷಣಾ ಗೋಪುರ (ವಾಚ್ ಟವರ್)ಗಳನ್ನು ನಿರ್ಮಿಸಲಿದ್ದಾರೆ. ಹೆಚ್ಚು ಜನ ಸೇರುವ ಸೂಕ್ಷ್ಮ ಪ್ರದೇಶವೂ ಆಗಿರುವ ಬ್ರಿಗೇಡ್ ರಸ್ತೆ ಹಾಗೂ ಎಂ.ಜಿ ರಸ್ತೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಅವರು ವಿಭಾಗದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. 22 ವಾಚ್ ಟವರ್‌ಗಳನ್ನು ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಚರ್ಚ್ ಸ್ಟ್ರೀಟ್‌ನ ಸ್ಟಾರ್‌ಬಕ್ಸ್ ಮುಂಭಾಗ, ಪಿಎಚ್‌ಪಿ ರಸ್ತೆ, ಎಂ.ಜಿ ರಸ್ತೆ, ಕುಮಾರಯ್ಯ ರಸ್ತೆ ಜಂಕ್ಷನ್, ಗರುಡಾ ಮಾಲ್ ಜಂಕ್ಷನ್, ಬ್ರಿಗೇಡ್ ರಸ್ತೆ, ಒಪೆರಾ ಸರ್ಕಲ್ ಬಿಸಿಡಿ ಕನ್ಸ್‌ಟ್ರಕ್ಷನ್, ವಾರ್ ಮೆಮೋರಿಯಲ್, ಅಂಬೇಡ್ಕರ್ ಪ್ರತಿಮೆ, ರೆಸಿಡೆನ್ಸಿ ರಸ್ತೆಗಳಲ್ಲಿ ವಾಚ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಲಕ್ಷಾಂತರ ಜನರು ಸೇರುವಂತಹ ಸಂಭ್ರಮದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. 1ಎಂಜಿ ರಸ್ತೆ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ 11 ಡ್ರೋನ್‌ಗಳು ಹಾರಾಟ ನಡೆಸಲಿವೆ. ಎಂ.ಜಿ ರಸ್ತೆ, ರೆಸಿಡೆನ್ಸಿ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ಇತರ ರಸ್ತೆಗಳಲ್ಲಿ 14 ಮಹಿಳಾ ಸಹಾಯವಾಣಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಪೊಲೀಸರ ಭದ್ರತೆ ಹಾಗೂ ಸುರಕ್ಷತೆ ಕ್ರಮಗಳು, ಸಾರಿಗೆ ಸಂಪರ್ಕ, ಸಂಚಾರ ಮಾರ್ಗ ಬದಲಾವಣೆ, ಪೊಲೀಸ್ ಸಹಾಯವಾಣಿ ಸೇರಿದಂತೆ ಪ್ರತಿ ಮಾಹಿತಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಪೊಲೀಸರು ಸ್ಕ್ಯಾನರ್ ಬಿಡುಗಡೆ ಮಾಡಲಾಗುತ್ತಿದೆ.

