Site icon BosstvKannada

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ : ರಾಜ್ಯಾದ್ಯಂತ ಭುಗಿಲೆದ್ದ ಭಕ್ತರ ಆಕ್ರೋಶ

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಭಕ್ತರ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿ, ಅಪಪ್ರಚಾರ ಮಾಡುತ್ತಿರುವುದಲ್ಲದೇ ಧರ್ಮದ ಸನ್ನಿಧಿಗೆ ಅವಹೇಳನ ಮಾಡಲಾಗುತ್ತಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಯಚೂರು, ಬಾಗಲಕೋಟೆ, ಚಾಮರಾಜನಗರ, ಗದಗ, ಮೈಸೂರು, ಕಲಬುರಗಿ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ರಾಮನಗರ ಸೇರಿದಂತೆ ವಿವಿಧೆಡೆ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿವೆ.

ಧರ್ಮಸ್ಥಳ ಪರ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಪುರಾಣ ಪ್ರಸಿದ್ಧವಾದ ಧರ್ಮ ಕ್ಷೇತ್ರಕ್ಕೆ ಧಕ್ಕೆ ತರುವ ಸುಳ್ಳು ನಿಂದನೆಗಳನ್ನು ಹಲವರು ಮಾಡಿ ಭಕ್ತರ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ಗಿರೀಶ್‌ ಮಠಣ್ಣವರ್‌, ಮಹೇಶ್‌ ತಿಮರೋಡಿ, ಸಮೀರ್‌, ಜಯಂತ್‌ ಮತ್ತಿತರರು ಅಪಪ್ರಚಾರ ಮಾಡುತ್ತಿದ್ದು, ಇವರ ಹಿಂದೆ ಯಾರಿದ್ದಾರೆ? ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬೆಳಗಾವಿ, ಕೊಪ್ಪಳ, ಗದಗ-ಕಲಬುರಗಿಯಲ್ಲೂ ವಿವಿಧ ಧಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ವೀರೇಂದ್ರ ಹೆಗಡೆ ಕುಟುಂಬಕ್ಕೆ ಕಳಂಕ ತರುವ ಒಳಸಂಚು ನಡೆಸಲಾಗುತ್ತಿದ್ದು, ಇದನ್ನ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಆ.20ರಂದು ಧರ್ಮಸ್ಥಳಕ್ಕೆ ಬಹತ್‌ ಜಾಥಾ ನಡೆಸುವ ಮೂಲಕ ಭಕ್ತರ ಶಕ್ತಿಪ್ರದರ್ಶನ ನಡೆಸಲಿದ್ದೇವೆ. ಈ ಕೂಡಲೇ ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರಗೊಳಿಸುವ ಕೆಲಸ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

Exit mobile version