ಬೆಂಗಳೂರು: ಕಾಂಗ್ರೆಸ್ ನಾಯಕ ಎಚ್.ಎಂ. ರೇವಣ್ಣ ಅವರ ಪುತ್ರ ಇದ್ದ ಕಾರು ಅಪಘಾತವಾಗಿದ್ದು, ಓರ್ವ ಯುವಕ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ಗುಡೆಮಾರೇನಹಳ್ಳಿ ಟೋಲ್ ಹತ್ತಿರ ಕಾರು ಅಪಘಾತವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ಬೈಕ್ ಗೆ ಕಾರು ಡಿಕ್ಕಿಯಾದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರಾಜೇಶ್ ಬಿ.ಜಿ. ಸಾವನ್ನಪ್ಪಿದ ದುರ್ದೈವಿ ಎಂದು ತಿಳಿದು ಬಂದಿದೆ. ರಾಜೇಶ್ ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ಎನ್ನಲಾಗಿದೆ. ಅವರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸಾವನ್ನಪ್ಪಿರುವ ರಾಜೇಶ್, ದಾಬಸ್ ಪೇಟೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ, ಕಾರಿನಲ್ಲಿದ್ದವರು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ಆ ವೇಳೆ ಸ್ಥಳೀಯರು ಕಾರು ಬೆನ್ನಟ್ಟಿ ನಿಲ್ಲಿಸಿದ್ದಾರೆ.
ಫಾರ್ಚೂನರ್ ಕಾರಿನಲ್ಲಿ ರೆವಣ್ಣ ಅವರ ಮಗ ಶಶಾಂಕ್, ಹೆಂಡತಿ, ಮಗು, ವಯಸ್ಸಾದ ವ್ಯಕ್ತಿಯಿದ್ದರು ಎನ್ನಲಾಗಿದೆ. ಬೈಕ್ ಗಳನ್ನು ಓವರ್ ಟೇಕ್ ಮಾಡಲು ಹೋಗಿ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಆ ವೇಳೆ ರೇವಣ್ಣ ಅವರ ಪುತ್ರ ದುರಹಂಕಾರದಿಂದ ಮಾತನಾಡಿದ್ದಾರೆ ಎನ್ನಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಚ್.ಎಂ. ರೇವಣ್ಣ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

