ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಗುದ್ದಾಟ ಜೋರಾಗಿದ್ದು, ಇದರ ಮಧ್ಯೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ.
ಇದು ತೀವ್ರ ಚರ್ಚೆಗೆ ಕಾರಣವಾಗಿದ್ದರೆ, ಕುತೂಹಲಕ್ಕೂ ಕಾರಣವಾಗಿದೆ. ಕುರ್ಚಿ ಗುದ್ದಾಟದ ಡ್ಯಾಮೇಜ್ ಸರಿ ಮಾಡಲು, ಜನರಿಗೆ ಯಾವುದೇ ಕುರ್ಚಿ ಗುದ್ದಾಟ ಇಲ್ಲ ಎಂಬ ಸಂದೇಶ ನೀಡುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆಂಬುವುದು ಕೂಡ ಈ ಮೂಲಕ ಬಹಿರಂಗವಾಗಿದೆ.
ಆದರೆ, ಸಿಎಂ ಸಿದ್ದರಾಮಯ್ಯ ಅವರು ಒಬ್ಬರೇ ಡಿಸಿಎಂ ಮನೆಗೆ ಹೋಗಿದ್ದಾರೆ. ಯಾವುದೇ ನಾಯಕರು ಅವರೊಂದಿಗೆ ಹೋಗಿಲ್ಲ. ಸಿಎಂ ಆಗಮಿಸುತ್ತಿದ್ದಂತೆ ಡಿಕೆಶಿ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಆ ವೇಳೆ ಸಿಎಂ ಕಾಲಿಗೆ ಬಿದ್ದು ಕುಣಿಗಲ್ ರಂಗನಾಥ್ ನಮಸ್ಕರಿಸಿದ್ದಾರೆ. ಕೆಲವು ಸಚಿವರು ಹಾಗೂ ಶಾಸಕರು ಕೂಡ ಸಿಎಂ ಜೊತೆ ತೆರಳಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಯಾವೊಬ್ಬ ನಾಯಕರೂ ತೆರಳಿಲ್ಲ.
ಶನಿವಾರ ಸಿಎಂ ಕಾವೇರಿ ನಿವಾಸದಲ್ಲಿ ಡಿಸಿಎಂಗಾಗಿ ಬ್ರೇಕ್ ಫಾಸ್ಟ್ ಸಭೆ ಆಯೋಜಿಸಲಾಗಿತ್ತು. ಅಂದೇ ಡಿಸಿಎಂ ಕೂಡ ಸಿಎಂಗೆ ಆಹ್ವಾನ ನೀಡಿದ್ದರು. ತಮ್ಮ ಮನೆಗೆ ಆಗಮಿಸಿ ಉಪಹಾರ ಸೇವಿಸಬೇಕು ಎಂದು ಕೇಳಿಕೊಂಡಿದ್ದರು. ಹೀಗಾಗಿ ಸಿಎಂ ಆಗಮಿಸಿದ್ದಾರೆ. ಹಾವು-ಮುಂಗಸಿಯಂತೆ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿರುವ ಇಬ್ಬರ ಈ ಉಪಹಾರ ಕೂಟ ಮಾತ್ರ ರಾಜಕೀಯ ಚರ್ಚೆಯ ಹೂರಣವಾಗಿದೆ.

