ನಾಡಹಬ್ಬ ಮೈಸೂರು ದಸರಾ-2025 ರ (Mysuru Dasara) ಆಚರಣೆ ಕುರಿತು ಇಂದು ವಿಧಾನಸೌಧದಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಡೀತು. ಈ ಸಭೆಯಲ್ಲಿ ಮೈಸೂರು ದಸರಾ ಹಬ್ಬದ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈ ಬಾರಿಯ ಮೈಸೂರು ದಸರಾ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರದ ಸಾಧನೆಗಳು, ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದರು. ಈ ಬಾರಿ ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು ಎಂದು ಹೇಳಿದರು.
ಸೆಪ್ಟಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ. ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು. ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.