ನ್ಯಾ. ಮೈಕೆಲ್ ಕುನ್ಹಾ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಮೈಕೆಲ್ ಡಿ ಕುನ್ಹಾ ಆಯೋಗ, ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿದ್ದು, ಅಂಗೀಕಾರವು ಆಗಿದೆ. ಈ ವರದಿಯ ಶಿಫಾರಸ್ಸು ಮತ್ತು ಪ್ರಮುಖಾಂಶಗಳು ದಾಖಲೆಗಳು ಬಾಸ್ ಟಿವಿಗೆ ಲಭ್ಯ ವಾಗಿದ್ದು, ಅದರ ಇಂಚಿಂಚೂ ಮಾಹಿತಿ ಇಲ್ಲಿದೆ.
ವರದಿಯಲ್ಲಿನ ಪ್ರಮುಖ ಅಂಶಗಳು :
- ಯಾವುದೇ ಬೃಹತ್ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಏಳು ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು.
- ಕಾರ್ಯಕ್ರಮ ನಡೆಯುವ ನಿರ್ದಿಷ್ಟ ಸ್ಥಳ, ಭಾಗವಹಿಸುವವರ ನಿಖರ ಸಂಖ್ಯೆ, ವಾಹನ ಸಂಖ್ಯೆ, ಕಾರ್ಯಕ್ರಮ ನಡೆಯುವ ಒಟ್ಟು ಅವಧಿ ಸೇರಿದಂತೆ ಸಮಗ್ರ ಮಾಹಿತಿಯೊಂದಿಗೆ ಐದು ಮಂದಿಯ ಸಂಪರ್ಕ ಸಂಖ್ಯೆಸಹಿತ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಎಂಬ ಆದೇಶವಿದೆ. ಆದರೆ ಆಯೋಜಕರು ಈ ಆದೇಶ ಪಾಲಕ ವಲ್ಲಿ ವಿಫಲರಾಗಿದ್ದಾರೆ.
- ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸೂಕ್ತ ಪೂರ್ವಾನುಮತಿ ಇಲ್ಲದೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜನೆ
- ವಿಜಯೋತ್ಸವ ಕಾರ್ಯಕ್ರಮವು ಸಂಪೂರ್ಣ ಅನಧಿಕೃತವಾಗಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದೆ ಆಯೋಜನೆಯಾಗಿದೆ.
- ಇದರ ಸಂಪೂರ್ಣ ಅರಿವಿದ್ದರೂ ಅಂದಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್. ಟೆಕ್ಕನವರ್, ಕಬ್ಬನ್ಪಾರ್ಕ್ ಉಪವಿಭಾಗದ ಎಸಿಪಿ ಸಿ.ಬಾಲಕೃಷ್ಣ ಹಾಗೂ ಕಬ್ಬನ್ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಎ.ಕೆ.ಗಿರೀಶ್ ಅವರು ಕಾರ್ಯಕ್ರಮ ತಡೆಯುವಲ್ಲಿ ವಿಫಲ.
- ಆಯೋಜಕರು ಸಿದ್ದತೆ ಆರಂಭಿಸುವ ಮೊದಲೇ ನಗರ ಪೊಲೀಸ್ ಆಯುಕ್ತರು ಸೂಚನೆ ಯಂತೆ ಬಂದೋಬಸ್ತ್ ಕಲ್ಪಿಸಿರುವುದು ಆಯೋಜಕರೊಂದಿಗೆ ಶಾಮೀಲಾಗಿರುವುದನ್ನು ದೃಢಪಡಿಸುತ್ತದೆ.
- ಆರ್ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಜೂ.4 ರಂದು ಬೆಳಗ್ಗೆ 7.01 ಹಾಗೂ 8 ಗಂಟೆಗೆ ಹಂಚಿ ಕೊಂಡಿರುವ ಸಂದೇಶವೇ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು, ಸಾರ್ವಜನಿಕರು ಜಮಾವಣೆಗೊಳ್ಳಲು ಕಾರಣ.
- ಸಾರ್ವಜನಿಕರಿಗೂ ಮುಕ್ತ ಆಹ್ವಾನ ನೀಡಿದ್ದರೂ ಪ್ರವೇಶಿಸಬೇಕಾದ ದ್ವಾರಗಳ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿರಲಿಲ್ಲ.
- ಆಯೋಜಕರು ಸಾರ್ವಜನಿಕರು, ಅಭಿಮಾನಿಗಳನ್ನು ಪ್ರವೇಶ ದ್ವಾರಗಳ ಬಳಿ ನಿಯಂತ್ರಿಸಲು ಕ್ರಮ ವಹಿಸದಿದ್ದುದು.
- ವಿವೇಚನಾರಹಿತ ಘೋಷಣೆ,ಕರೆ ನೀಡಿದ್ದೇ ಕಾಲ್ತುಳಿತ ಉಂಟಾಗಿ ಸಾವು- ನೋವು ಸಂಭವಿಸಲು ಪ್ರಮುಖ ಕಾರಣ.
- ಭದ್ರತೆ ಹಾಗೂ ಸುರಕ್ಷತೆಗೆ ಸೂಕ್ತ ಕ್ರಮ ವಹಿಸುವಲ್ಲಿ ಆಯೋಜಕರು ವಿಫಲರಾಗಿದ್ದಾರೆ.
- ಸಿದ್ಧತೆ ಕೊರತೆ ಹಾಗೂ ತರಾತುರಿಯ ನಿರ್ಧಾರಗಳಿಗೂ ಆಯೋಜಕರು ಉತ್ತರದಾಯಿ
- ಭದ್ರತೆಗೆ ನಿಯೋಜನೆ ಗೊಂಡಿದ್ದ 515 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಪೈಕಿ ಕೇವಲ 79 ಮಂದಿಯನ್ನಷ್ಟೇ ಕ್ರೀಡಾಂಗಣದ ಹೊರಭಾಗದಲ್ಲಿ ಜನರ ನಿಯಂತ್ರಣಕ್ಕೆ ನಿಯೋಜಿಸಲಾಗಿತ್ತು.
- ಆ ಬೆರಳೆಣಿಕೆ ಸಿಬ್ಬಂದಿ ಸಹ ಅವಘಡದ ಸಂದರ್ಭದಲ್ಲಿ ಹೆಚ್ಚಿಗೆ ಕಾಣಲಿಲ್ಲ.
- ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಕೆ ಹಾಗೂ ಕಿರಿದಾದ ಪ್ರವೇಶ ದ್ವಾರಗಳು ಸಹ ದುರ್ಘಟನೆಗೆ ಕಾರಣ.
- ಕೊನೆಯ ಕ್ಷಣದಲ್ಲಿದಾರಿ ತಪ್ಪಿಸುವಂತಹ ಸಂದೇಶಗಳು ನೆರೆದಿದ್ದ ಜನಸಮೂಹದಲ್ಲಿ ಗೊಂದಲ ಸೃಷ್ಟಿಸಿತ್ತು.
- ಆ್ಯಂಬುಲೆನ್ಸ್ಗಳನ್ನು ದೂರದಲ್ಲಿ ನಿಯೋಜಿಸಿಕೊಂಡಿದ್ದು ಕೂಡ ತುರ್ತು ಚಿಕಿತ್ಸೆ ಸಿಗದಿರಲು ಕಾರಣ.
- ತಾತ್ಕಾಲಿಕ ಅಥವಾ ತುರ್ತು ಚಿಕಿತ್ಸಾ ಘಟಕ ಇರದ ಕಾರಣ ತುರ್ತು ಚಿಕಿತ್ಸೆಗೂ ಹಿನ್ನಡೆಯಾಗಿತ್ತು.
ಘಟನೆಗೆ ಯಾರೆಲ್ಲಾ ಕಾರಣ
- ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿ., (ಆರ್ಸಿಎಸ್ಪಿಎಲ್)/ ಆರ್ಸಿಬಿ. ಮುಖ್ಯವಾಗಿ ಉಪಾಧ್ಯಕ್ಷ ರಾಜೇಶ್ ಮೆನನ್
- ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಪ್ರೈ. ಲಿ. ಮುಖ್ಯವಾಗಿ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ವೆಂಕಟ್ ವರ್ಧನ್, ಉಪಾಧ್ಯಕ್ಷ ಸುನೀಲ್ ಮಾಥೋರ್
- ಕೆಎಸ್ಸಿಎ. ಅದರಲ್ಲೂ ಪ್ರಮುಖವಾಗಿ ಅಧ್ಯಕ್ಷ ರಘುರಾಂ ಭಟ್, ಮಾಜಿ ಕಾರ್ಯದರ್ಶಿ ಎ.ಶಂಕರ್, ಮಾಜಿ ಖಜಾಂಚಿ ಈ.ಎಸ್.ಜೈರಾಮ್
- ಪೊಲೀಸ್ ಅಧಿಕಾರಿಗಳಾದ ಬಿ.ದಯಾನಂದ, ವಿಕಾಸ್ ಕುಮಾರ್, ಶಂಕರ್ ಎಚ್. ಟೆಕ್ಕನವರ್, ಸಿ.ಬಾಲಕೃಷ್ಣ, ಎ.ಕೆ.ಗಿರೀಶ್

