BosstvKannada

ಗೃಹ ಕಾರ್ಮಿಕರ ವಿಧೇಯಕ 2026 ಕ್ಕೆ ಸಚಿವ ಸಂಪುಟ ಅಸ್ತು

ಬೆಂಗಳೂರು, ಜ.08: ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ, 2026 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಕಾರ್ಮಿಕ ಇಲಾಖೆಯು ಮತ್ತೊಂದು ಮಹತ್ವದ ಕ್ರಮ ಜಾರಿಗೆ ಸರ್ಕಾರ ಮುಂದಾಗಿದೆ.

ಮಹಿಳಾ ಸಬಲೀಕರಣದ ಮತ್ತೊಂದು ಉಪಕ್ರಮ :
ಐತಿಹಾಸಿಕ ಋತುಚಕ್ರ ರಜೆಯನ್ನು ಜಾರಿ ಮಾಡಿದ ಬೆನ್ನಲ್ಲೆ ಮತ್ತೊಂದು ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಗೃಹ ಕಾರ್ಮಿಕರು ಹೆಚ್ಚಿನವರು ಮಹಿಳೆಯರೇ ಆಗಿದ್ದು, ಅವರ ಕಲ್ಯಾಣ ಮತ್ತು ಭದ್ರತೆಯ ದೃಷ್ಟಿಯಿಂದ ಈ ವಿಧೇಯಕ ಮಹತ್ವದ ಪಾತ್ರ ವಹಿಸಲಿದೆ.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶ್ರಮ :
ಋತುಚಕ್ರ ರಜೆಯನ್ನು ಜಾರಿ ಮಾಡಿದ್ದ ಸಚಿವ ಸಂತೋಷ್‌ ಲಾಡ್‌ (Santosh Lad) ಅವರು, ಗೃಹ ಕಾರ್ಮಿಕರ ಕಲ್ಯಾಣ ವಿಧೇಯಕಕ್ಕೆ ಅನುಮೋದನೆ ದೊರಕಿಸಿಕೊಡುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಉದ್ದೇಶಿತ ಮಸೂದೆಯು ರಾಜ್ಯದಲ್ಲಿ ಅಧಿಸೂಚಿತವಾಗಿರುವ ಎಲ್ಲಾ ನಗರ ಪಾಲಿಕೆಗಳಿಗೆ ಅನ್ವಯವಾಗಲಿದೆ. ಮಸೂದೆಯ ಕರಡನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮಸೂದೆಯ ಬಗ್ಗೆ ಮನೆಕೆಲಸದವರ ಸಂಘಟನೆಗಳ ಒಕ್ಕೂಟದೊಂದಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಒಂದು ವೇಳೆ ಮಸೂದೆ ಜಾರಿಯಾದರೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿಯಾಗಲಿದೆ.

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಸಚಿವ ಲಾಡ್‌ ಪಣ :
ಕಾರ್ಮಿಕ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಅಸಂಘಟಿತ ವರ್ಗದ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೌಲಭ್ಯಗಳನ್ನು ಜಾರಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೀಗ ಮನೆಕೆಲಸದವರಿಗೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಈ ವಿಧೇಯಕ ಸಹಾಯವಾಗಲಿದೆ.

Exit mobile version