ಬೆಂಗಳೂರು ಮಾ.19 : ರಾಜ್ಯದ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಹಿರಿಯ ನಾಯಕ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಲಾಗಿದೆ. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಚ್ಚರಿಯ ಆಯ್ಕೆಯಾಗಿ ಶ್ರೀನಿವಾಸ್ ಟಿ. ದಾಸ ಕರಿಯಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಹೊಂದಿರುವ ಚರಂತಿಮಠ ಅವರ ಹೆಸರನ್ನು ಅಂತಿಮಗೊಳಿಸುವ ಮೂಲಕ ಬಿಜೆಪಿ ಹಳೆ ಮುಖಕ್ಕೆ ಮನ್ನಣೆ ನೀಡಿದೆ. ಇತ್ತ ದಾವಣಗೆರೆ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಿದೆ.
ಈ ಎರಡು ಕ್ಷೇತ್ರಗಳ ಉಪಚುನಾವಣೆಯು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಕಣವಾಗಿದೆ. ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ವರಿಷ್ಠರು ಮತ್ತು ಕಾರ್ಯಕರ್ತರು ಗೆಲುವಿಗಾಗಿ ರಣತಂತ್ರ ರೂಪಿಸಲು ಸಜ್ಜಾಗಿದ್ದಾರೆ.

ʼಕೈʼಯಿಂದ ಮೇಟಿ ಫ್ಯಾಮಿಲಿಗೆ ಟಿಕೆಟ್ ಫಿಕ್ಸ್? :
ಎಚ್.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಮೇಟಿ ಕುಟುಂಬದಲ್ಲಿ ಪೈಪೋಟಿ ನಡೆಯುತ್ತಿರುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದಿಂದ ಮೇಟಿ ಕುಟುಂಬದವರಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಟಿ ಪುತ್ರರಾದ ಮಲ್ಲಿಕಾರ್ಜುನ, ಉಮೇಶ್, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕುಟುಂಬದವರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಿಮ್ಮ ಮನೆಯಲ್ಲಿಯೇ ಒಬ್ಬರಿಗೆ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಅಂತಾ ಹೇಳಲಾಗಿದೆ.
ಇನ್ನು ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಅಂತಾ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಮತ್ತು ಬಾಯಕ್ಕ ಮೇಟಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಆದರೆ, ಮಹಾದೇವಿ ಮೇಟಿ ಮಾತ್ರ “ನನಗೇ ಟಿಕೆಟ್ ನೀಡಬೇಕು. ನನಗೆ ನೀಡದಿದ್ದರೆ, ಸಹೋದರ ಉಮೇಶ ಮೇಟಿಗೆ ನೀಡಬೇಕು. ನಮ್ಮಿಬ್ಬರಲ್ಲಿ ಒಬ್ಬರಿಗೆ ನೀಡದೇ ಇದ್ದರೆ ನಾನು ಸ್ಪರ್ಧೆ ಮಾಡುತ್ತೇನೆ” ಅಂತಾ ಬಂಡಾಯದ ಮುನ್ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗುತ್ತಿದೆ.
ದಾವಣಗೆರೆ ಕಾಂಗ್ರೆಸ್ ಪಾಳೆಯದಲ್ಲಿ ಟಿಕೆಟ್ ಫೈಟ್:
ಹಿರಿಯ ಶಾಸಕ ಹಾಗೂ ಅಖಿಲ ಭಾತರ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಕ್ಷೇತ್ರದ ಅತೀ ಹೆಚ್ಚು ಮತದಾನ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದವರೇ ಅಭ್ಯರ್ಥಿ ಆಗಬೇಕು ಎಂದು ಮುಸ್ಲಿಂ ನಾಯಕರು ಬಿಗಿಪಟ್ಟು ಹಿಡಿದಿದ್ದರೆ, ಅತ್ತ ಹಾಲಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಮ್ಮ ಪುತ್ರ ಸಮರ್ಥ್ರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ 3 ದಿನಗಳಿಂದ ವಿಧಾನಸಭಾ ಅಧಿವೇಶನಕ್ಕೂ ಬಾರದ ಮಲ್ಲಿಕಾರ್ಜುನ್, ಉಸ್ತುವಾರಿ ಸಮಿತಿ ಸಭೆಗೂ ಗೈರಾಗಿದ್ದಾರೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಮನೂರು ಕುಟುಂಬಸ್ಥರ ಪರ ಕೆಲವು ಸಚಿವರು ಬ್ಯಾಟಿಂಗ್ ಮಾಡಿದ್ದರೆ, ಇನ್ನು ಕೆಲವರು ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಒತ್ತಾಯಿಸಿದ್ದಾರೆ. ಉಸ್ತುವಾರಿ ಸಮಿತಿ ಸಭೆಯಲ್ಲೂ ಎಂಟು ಮಂದಿಯ ಹೆಸರು ಪ್ರಸ್ತಾಪವಾಗಿದ್ದು, ಆ ಪೈಕಿ ಐವರ ಹೆಸರು ಅಲ್ಪಸಂಖ್ಯಾತ ಸಮುದಾಯದವರದ್ದಾಗಿದೆ.
ಮಾ.23 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ:
ಇನ್ನು ಇದೇ ಏಪ್ರಿಲ್ 9 ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಮಾರ್ಚ್ 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಾಂಗ್ರೆಸ್‌ಗೆ ಈ ಉಪಚುನಾವಣೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಖುರ್ಚಿ ಕದನದ ಬಗ್ಗೆ ಪಕ್ಷವು ಗೊಂದಲದಿಂದ ಕೂಡಿರುವ ಸಮಯದಲ್ಲಿ ಬಂದಿದೆ. ಗ್ಯಾರಂಟಿ ವೆಚ್ಚದ ಕಾರಣಕ್ಕೆ ಅಭಿವೃದ್ಧಿ ಕುಂಠಿತದ ಬಗ್ಗೆ ಸರ್ಕಾರದ ವಿರುದ್ಧ ಬಿಜೆಪಿಯ ಪ್ರತಿರೋಧ, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿ ಸಮಸ್ಯೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕಡಿತದ ವಿಚಾರ ಸೇರಿದಂತೆ ಕಾಂಗ್ರೆಸ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ ಉಪ ಚುನಾವಣಾ ಕದನದಲ್ಲಿ ಗೆಲ್ಲುವರ್ಯಾರು ಎಂಬುದನ್ನು ಕಾದು ನೋಡಬೇಕಿದೆ.