Site icon BosstvKannada

ಮತ್ತೊಂದು ಕಚೇರಿಗೆ ಬಾಂಬ್ ಬೆದರಿಕೆಯ ಕರೆ!

ಉತ್ತರ ಕನ್ನಡ: ಕಳೆದ ಕೆಲವು ದಿನಗಳಿಂದ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿವೆ. ಈಗ ಮತ್ತೆ ಎರಡು ಕಚೇರಿಗೂ ಬಾಂಬ್ ಬೆದರಿಕೆಯ ಕರೆ ಬಂದಿದೆ.

ಉತ್ತರ ಕನ್ನಡದ ಭಟ್ಕಳ ತಹಸೀಲ್ದಾರ್ ಕಚೇರಿ ಹಾಗೂ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆಯ ಕರೆ ಬಂದಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ಸೋಮವಾರವಷ್ಟೇ ಗದಗ ಹಾಗೂ ಮಂಗಳೂರಿನ ಸರ್ಕಾರಿ ಕಚೇರಿಗಳಲ್ಲಿಯೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈಗ ಮತ್ತೊಮ್ಮೆ ಇಂತಹ ಇ-ಮೇಲ್ ಬಂದಿದೆ.

ಭಟ್ಕಳ್ ತಹಸೀಲ್ದಾರ್ ಕಚೇರಿಗೆ ಬೆಳಿಗ್ಗೆ 7.25ರ ಸುಮಾರಿಗೆ “ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ” ಎಂಬ ಇ-ಮೇಲ್ ಐಡಿಯಿಂದ ಬೆದರಿಕೆಯ ಸಂದೇಶ ಬಂದಿದೆ. ಕಚೇರಿಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ. “ಎಲ್ಲರನ್ನೂ ತಕ್ಷಣ ತಹಶೀಲ್ದಾರ್ ಕಚೇರಿಯಿಂದ ತೆರವುಗೊಳಿಸಿ” ಎಂದು ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.

ಸಂದೇಶದ ಒಳಗೆ, ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ತಮಿಳುನಾಡಿನ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು. ಇದು ಹತೋಟಿ ತಪ್ಪಿದಾಗ ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಮೂಲಕ ಗೆಲಿಲಿಯೋ ಆ್ಯಪ್ ಮೂಲಕ ಕನ್ನಡದವರ ಮೇಲೆ ಗೂಡಾಚಾರಿಕೆ ನಡೆಸಿದರು. ಡಿಎಂಕೆ ಉದಯನಿಧಿಯ ಉದ್ದೇಶ ಹಣಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಎಂಬೆಲ್ಲ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Exit mobile version