ಮುಂಬೈ: ವಸತಿ ಕಟ್ಟಡದ ಮೇಲೆ ಫೈರಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಅರೆಸ್ಟ್ ಆಗಿರುವ ಘಟನೆ ನಡೆದಿದೆ.
ಬಾಲಿವುಡ್ ನಟ ಕಮಲ್ ಆರ್ ಖಾನ್ (Kamal R Khan) ಅರೆಸ್ಟ್ ಆಗಿದ್ದಾರೆ. ಜ.18ರಂದು ನಡೆದ ಗುಂಡಿನ ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ನಟ ಕಮಲ್ ರಶೀದ್ ಖಾನ್ ರನ್ನು ಜ.23ರಂದು ಸಂಜೆ ಓಶಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಧೇರಿಯ (Andheri) ಓಶಿವಾರದಲ್ಲಿರುವ (Oshiwara) ನಳಂದ ಸೊಸೈಟಿಯಿಂದ ಎರಡು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಟ್ಟಡದ ಎರಡನೇ ಮತ್ತು ನಾಲ್ಕನೇ ಮಹಡಿಯಲ್ಲಿ ತಲಾ ಒಂದೊಂದು ಗುಂಡು ಪತ್ತೆಯಾಗಿವೆ. ವಿಚಾರಣೆ ವೇಳೆ ಕಮಲ್ ಖಾನ್ ಗುಂಡಿನ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಪರವಾನಗಿ ಪಡೆದ ಬಂದೂಕಿನಿಂದ ಶೂಟ್ ಮಾಡಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣದ ಕುರಿತು ಓಶಿವಾರಾ ಪೊಲೀಸ್ ಠಾಣೆ ಪೊಲೀಸರ ತಂಡ ತನಿಖೆ ನಡೆಸಿದ್ದು, ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿಯೂ ಏನು ಪತ್ತೆಯಾಗಿರಲಿಲ್ಲ. ವಿಧಿವಿಜ್ಞಾನ ತಂಡದ ಸಹಾಯದಿಂದ ಕಮಲ್ ಆರ್ ಖಾನ್ ಅವರ ಬಂಗಲೆಯಿಂದ ಗುಂಡು ಹಾರಿಸಿರಬಹುದು ಎಂದು ಶಂಕಿಸಿದಾಗ ಸತ್ಯ ಬಯಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

