ಬೆಂಗಳೂರು, ಡಿ.23 : ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿ ಹಾಗೂ ಮಾಜಿ ಸಚಿವ, ಬಿಜೆಪಿ ಶಾಸಕ ಭೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ.
ಇಂದು (ಡಿ.23) ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರಿದ್ದ ನ್ಯಾಯಪೀಠ ಆದೇಶ ಹೊರಡಿಸಿದ್ದು, ಭೈರತಿ ಬಸವರಾಜ್‌ಗೆ ಬಿಗ್ ಶಾಕ್ ನೀಡಿದೆ. ಕಳೆದ ಜುಲೈ ತಿಂಗಳಿನಲ್ಲಿ ಭಾರತಿ ನಗರದಲ್ಲಿ ಬಿಕ್ಲು ಶಿವನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.
ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ :
ಸದ್ಯ ಶಾಸಕ ಭೈರತಿ ಬಸವರಾಜು ತಲೆ ಮರೆಸಿಕೊಂಡಿದ್ದು, ಸಿಐಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಹಿಂದೆ ಪೊಲೀಸರ ವಿಚಾರಣೆ ವೇಳೆ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಭೈರತಿ ಸುಳ್ಳು ಹೇಳಿದ್ದರು ಅಂತ ಹೇಳಲಾಗ್ತಿತ್ತು. ಆದ್ರೆ, ಕುಂಭಮೇಳ ವೇಳೆ ಆರೋಪಿಗಳೊಂದಿಗೆ ಪ್ರಯಾಣ ಬೆಳೆಸಿರುವ ಫೋಟೊಗಳು ಸಹ ಸಿಕ್ಕಿದ್ದವು. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನ ಸಮಯದಲ್ಲೇ ಭೈರತಿ ತಲೆ ಮರೆಸಿಕೊಂಡಿದ್ದಾರೆ. ಇಲ್ಲಿವರೆಗೂ ಅವರ ಬಂಧನವಾಗಿಲ್ಲ.

