ಬೆಳಗಾವಿ: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಬೀದಿಗಳಿದಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯ ಸರ್ಕಾರವು ರೈತ ವಿರೋಧಿ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತ ಮುಖಂಡರು ಮತ್ತು ಬಿಜೆಪಿ ನಾಯಕರು, ಕಾರ್ಯಕರ್ತರು ಪಾದಯಾತ್ರೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಹಲಗಾ ಮಾರ್ಗವಾಗಿ ಸೌಧ ಬಳಿ ಹೊರಟ ಮೆರವಣಿಗೆಯನ್ನು ಪೊಲೀಸರು ತಡೆದರು. ಬಿಜೆಪಿ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಅಲ್ಲದೇ, ಇದಕ್ಕೂ ಮುನ್ನ ಬಿಜೆಪಿ ನಾಯಕರು ಬೆಳಗಾವಿ ಮಾಲಿನಿ ಗ್ರೌಂಡ್ನಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತು. ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸುವ ಕೆಲಸ ಮಾಡಬೇಕು, ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ನಾವು ಬಿಡುವುದಿಲ್ಲ. ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು, ಎರಡು ಜಿಲ್ಲೆ ಆಗಬೇಕು ಎಂದು ಪ್ರತಿಭಟನಾಕಾರರು ಪ್ರತಿಭಟಿಸಿದರು.,
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿಲ್ಲ. ಶಾಸಕರ ಖರೀದಿ ಕೇಂದ್ರ ತೆರೆದಿದೆ. ಸರ್ಕಾರವೇ ಕಚ್ಚಾಟದಲ್ಲಿ ಮುಳುಗಿದೆ. ಅದೇ ಚರ್ಚೆ ಮಾಡಿಕೊಂಡು ಆಡಳಿತ ಮರೆತಿದ್ದಾರೆ. ಅಧಿಕಾರ ಹಸ್ತಾಂತರ ಬೇಗ ಮಾಡಿಕೊಂಡು ಅಭಿವೃದ್ಧಿ ಕಡೆ ಗಮನ ಕೊಡಿ. ಕೇಂದ್ರದ ವಿರುದ್ಧ ಆರೋಪ ಬಿಡಿ, ಲವ್ ಲೆಟರ್ ಬರೆಯೋದು ಬಿಡಿ ಎಂದು ಮನವಿ ಮಾಡಿದರು.
ರೈತರು ಆತ್ಮಹತ್ಯೆ ಮಾಡ್ಕಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ರೈತರ ಸಮಸ್ಯೆ ಕೇಳುತ್ತಿಲ್ಲ. ಈ ಸರ್ಕಾರ ಬದುಕಿಲ್ಲ. ಮೆಕ್ಕೆಜೋಳ ಖರೀದಿ ಮಿತಿ ಈಗ ಜಾಸ್ತಿ ಮಾಡಿದರು. ಇಷ್ಟು ದಿನ ಸರ್ಕಾರ ಮಣ್ಣು ತಿನ್ನುತ್ತಿತ್ತಾ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಈ ಸರ್ಕಾರ ಲಜ್ಜೆಗೆಟ್ಟಿದೆ. ರೈತರಿಗೆ ಬೆಳೆ ಪರಿಹಾರ ಕೊಟ್ಟಿಲ್ಲ ಸರ್ಕಾರ. ಅತಿವೃಷ್ಟಿ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದರು. ಸರ್ಕಾರ ಜವಾಬ್ದಾರಿ ಮರೆತಿತ್ತು. ಸಚಿವರು ರೈತರ ಕಷ್ಟ ಕೇಳಲು ಹೋಗಲಿಲ್ಲ. ಈ ಸರ್ಕಾರಕ್ಕೆ ರೈತರ ಕಷ್ಟ ಕೇಳುವ ಮನಸ್ಸು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
