ಬೆಂಗಳೂರು : ಸಹಕಾರಿ ತತ್ವದಲ್ಲಿ ರೂಪಿತವಾಗಿರುವ ಭಾರತ್ ಟ್ಯಾಕ್ಸಿ ಇದೀಗ ಭಾರತದ ರೈಡ್ ಹೇಲಿಂಗ್ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ಸೌರಾಷ್ಟ್ರ ಮತ್ತು ದೆಹಲಿಯಲ್ಲಿ ಇದರ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಓಲಾ, ಊಬರ್, ರಾಪಿಡೋ ಪ್ರಾಬಲ್ಯ ಇರುವ ಈ ಸೆಕ್ಟರ್ನಲ್ಲಿ ಭಾರತ್ ಟ್ಯಾಕ್ಸಿ ಅಡಿ ಬರುವ ಎಲ್ಲಾ ಸಲಕರಣೆ ಮತ್ತು ಸಿದ್ಧತೆ ಹೊಂದಿದೆ. ಇದು ಸಹಕಾರ ತತ್ವದಲ್ಲಿ ರೂಪಿತವಾಗಿರುವ ಪ್ಲಾಟ್ಫಾರ್ಮ್ ಆಗಿದೆ. ಇದರಲ್ಲಿ ಡ್ರೈವರ್ಗಳೇ ಮಾಲೀಕರು.
ಅಮೂಲ್, ನಬಾರ್ಡ್, ಇಫ್ಕೋ ಮೊದಲಾದ ಎಂಟು ಪ್ರಮುಖ ಸಂಘಟನೆಗಳಿಂದ ಬೆಂಬಲಿತವಾಗಿರುವ ಭಾರತ್ ಟ್ಯಾಕ್ಸಿ ಪ್ಲಾಟ್ಫಾರ್ಮ್ನಲ್ಲಿ ಆಟೊ, ಕ್ಯಾಬ್, ಬೈಕ್ ಟ್ಯಾಕ್ಸಿಗಳ ಸೇವೆ ಲಭ್ಯ ಇದೆ. ಈ ಪ್ಲಾಟ್ಫಾರ್ಮ್ಗೆ 51,000ಕ್ಕೂ ಅಧಿಕ ಡ್ರೈವರ್ಗಳು ನೋಂದಣಿ ಮಾಡಿಕೊಂಡಿದ್ದಾರೆ.

2025ರ ಜೂನ್ನಲ್ಲಿ ಆರಂಭವಾದ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಭಾರತ್ ಟ್ಯಾಕ್ಸಿ ಪೂರ್ಣ ಸಹಕಾರಿ ತತ್ವದಲ್ಲಿ ಆಪರೇಟ್ ಮಾಡುತ್ತದೆ. ನಮ್ಮ ಯಾತ್ರಿ ಪ್ಲಾಟ್ಫಾರ್ಮ್ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಕೂಡ ಝೀರೋ ಕಮಿಷನ್ ಮಾಡಲ್ ಅನುಸರಿಸುತ್ತದೆ. ಅಂದರೆ, ಒಂದು ರೈಡ್ನಲ್ಲಿ ಸಿಗುವ ಆದಾಯವೆಲ್ಲವೂ ಡ್ರೈವರ್ಗೆ ಹೋಗುತ್ತದೆ. ಪ್ಲಾಟ್ಫಾರ್ಮ್ಗೆ ಕಮಿಷನ್ ಕೊಡುವ ಅಗತ್ಯ ಇರುವುದಿಲ್ಲ.
ಭಾರತ್ ಟ್ಯಾಕ್ಸಿಯ ಬೀಟಾ ವರ್ಷನ್ ಆ್ಯಪ್ಗಳು ಬಿಡುಗಡೆಯಾಗಿವೆ. ದೆಹಲಿ ಮತ್ತು ಗುಜರಾತ್ನ ಸೌರಾಷ್ಟ್ರದಲ್ಲಿ ಜನರು ಈ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಬಳಸಬಹುದು. ಕುಂದು ಕೊರತೆಗಳಿದ್ದರೆ ತಿಳಿಸಬಹುದು. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇನ್ನಷ್ಟು ನಗರಗಳಲ್ಲಿ ಈ ಟ್ಯಾಕ್ಸಿ ಸೇವೆ ವಿಸ್ತರಿಸಬಹುದಾಗಿದೆ.