Site icon BosstvKannada

Bengaluru Stampede : ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಗೃಹ ಸಚಿವ ಪರಮೇಶ್ವರ್‌..!

ಕಾಲ್ತುಳಿತ ಪ್ರಕರಣ (Bengaluru Stampede) ದಲ್ಲಿ ಹನ್ನೊಂದು ಮಂದಿಯ ಜೀವ ಹಾನಿಯಾಗಿದೆ. ಪರಿಸ್ಥಿತಿಯನ್ನು ಎದುರಿಸ ಬೇಕಾಗಿರುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ಹೇಡಿಯಂತೆ ಓಡಿ ಹೋಗಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಪಕ್ಷ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ಸಂಬಂಧ ಪಟ್ಟಂತೆ ನಾನು ಪತ್ನಿಯ ಜೊತೆಯಲ್ಲೂ ಚರ್ಚೆ ಮಾಡುವುದಿಲ್ಲ. ಈಗಿರುವಾಗ ಗೃಹ ಖಾತೆ ಬೇಡ ಎಂದು ನಾನು ಯಾರ ಬಳಿಯಲ್ಲೂ ಹೇಳಿಲ್ಲ. ಅನಗತ್ಯವಾಗಿ ನನ್ನ ಬಗ್ಗೆ ತಪ್ಪು ಸುದ್ದಿ ಪ್ರಕಟಿಸಿ ನನ್ನ ವ್ಯಕ್ತಿತ್ವವನ್ನು ಕೊಲೆ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇಂತಹದೇ ಖಾತೆಬೇಕೆಂದು ನಾನು ಮುಖ್ಯಮಂತ್ರಿ ಅವರ ಬಳಿಯಾಗಲಿ ಅಥವಾ ಇನ್ಯಾರ ಜೊತೆಯಲ್ಲಾಗಲಿ ಖಾತೆ ವಿಚಾರವಾಗಿ ಮಾತನಾಡಿಲ್ಲ. ಸ್ವತಃ ಪತ್ನಿಯ ಜೊತೆಯಲ್ಲೂ ರಾಜಕೀಯದ ಬಗ್ಗೆ ಮಾತನಾಡದಿರುವಾಗ ಆಪ್ತರ ಬಳಿ ಚರ್ಚೆ ಮಾಡಲು ಸಾಧ್ಯವೇ? ಇಂತಹ ಸುದ್ದಿಗಳನ್ನು ಯಾರು? ಸೃಷ್ಟಿಸುತ್ತಾರೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ರಾಜಕೀಯವಾಗಿ ನಾನು ಕಷ್ಟಪಟ್ಟು ಬೆಳೆದು ಬಂದಿದ್ದೇನೆ, ನನಗೂ ಅಭಿಮಾನಿಗಳು, ಹಿಂಬಾಲಕರು ಹಾಗೂ ಕ್ಷೇತ್ರದ ಜನರಿದ್ದಾರೆ. ಅವರು ಅನಗತ್ಯವಾಗಿ ತಪ್ಪು ತಿಳಿದುಕೊಳ್ಳುವಂತೆ ಮಾಡಬೇಡಿ ಎಂದು ಕೇಳಿಕೊಂಡರು.

ಕಾಲ್ತುಳಿತ ಪ್ರಕರಣ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ ಕಾಲ್ತುಳಿತ ಪ್ರಕರಣ ನಮಗೂ ಅಪಾರ ನೋವುಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕಿದೆ. ಖಾತೆ ಬದಲಾವಣೆಗೆ ನಾನು ಮುಖ್ಯಮಂತ್ರಿ ಬಳಿ ನಾನು ಯಾವುದೇ ಬೇಡಿಕೆ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲ್ತುಳಿತ ಪ್ರಕರಣವನ್ನು ಈಗಾಗಲೇ ನ್ಯಾಯಮೂರ್ತಿ ಮೈಕೆಲ್‌ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ಆಯೋಗದ ತನಿಖೆಗೆ ವಹಿಸಿದ್ದೇವೆ. ಈ ಹಂತದಲ್ಲೇ ಯಾವುದೇ ಹೇಳಿಕೆ ನೀಡಿದ್ದರೂ ಅದು ನ್ಯಾಯಾಂಗ ನಿಂದನೆಯಾಗಲಿದೆ. ತನಿಖಾ ಆಯೋಗದ ಮುಂದೆ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತೇವೆ ಎಂದರು.

ಸುಹಾಸ್‌‍ಶೆಟ್ಟಿ ಕೊಲೆ ಪ್ರಕರಣ

ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್‌‍ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿರುವುದಾಗಿ ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ ಎಂದು ತನ್ನ ಗಮನಕ್ಕೆ ಪೊಲೀಸ್‌‍ ಮಹಾನಿರ್ದೇಶಕರು ತಂದಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಯಾವ ಕಾರಣಕ್ಕೆ ಎನ್‌ಐಎ ತನಿಖೆಗೆ ವಹಿಸಲಾಗಿದೆ ಎಂದು ನನಗೆ ಗೊತ್ತಿಲ್ಲ ಆ ಭಾಗದ ಸಂಸದರು, ಶಾಸಕರು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿರಬಹುದು. ಆ ಕಾರಣಕ್ಕೆ ನಿರ್ಧಾರ ತೆಗೆದುಕೊಂಡಿರಬಹುದು ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಎಲ್ಲಾ ರೀತಿಯ ಪ್ರಕ್ರಿಯೆಗಳು ಮುಂದುವರೆದಿವೆ. ಅದಕ್ಕೆ ಇನ್ನೂ ಸಾಕಷ್ಟು ಸಮಯವಕಾಶವೂ ಇದೆ ಎಂದು ಹೇಳಿದರು. ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ಸಂಬಂಧ ಪಟ್ಟಂತೆ ಸಂಘರ್ಷ ಬೇಡ ಚರ್ಚಿಸಿ ಸಮಾಧಾನಕರ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದೇನೆ. ನೀರಾವರಿ ಸಚಿವರ ಜೊತೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

Exit mobile version