ಬಳ್ಳಾರಿ: ಬ್ಯಾನರ್ ಗಲಾಟೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ದೊಡ್ಡ ವಾಕ್ಸಮರಕ್ಕೂ ಅದು ಕಾರಣವಾಗಿದೆ. ಈಗಾಗಲೇ ಈ ಘಟನೆ ಓರ್ವ ಕಾರ್ಯಕರ್ತನ ಬಲಿ ಪಡೆದಿದ್ದು, ಈಗ ರಾಜಕಾರಣಿಗಳು ಹೆಣದ ಮೇಲೆ ರಾಜಕೀಯ ಆರಂಭಿಸಿದ್ದಾರೆ.
ಈಗ ಗಲಾಟೆ ವಿಚಾರವಾಗಿ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಶಾಸಕ ಜನಾರ್ದನ್ ರೆಡ್ಡಿ ತಮ್ಮ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತ ನಾಗರಾಜ್ ಅವರು ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಸೇರಿದಂತೆ ಇನ್ನಿತರ ವಿಷಯಗಳ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ (Janardhana Reddy) ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಬ್ರೂಸ್ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಎಸ್ಪಿ ರವಿಕುಮಾರ್ ಹಾಗೂ ಬ್ರೂಸ್ಪೇಟೆ ಠಾಣೆ ಪೊಲೀಸರು ಜನಾರ್ದನ ರೆಡ್ಡಿ ಮನೆಗೆ ಬಂದು ದೂರು ಸ್ವೀಕರಿಸಿದ್ದರು. ದೂರಿನನ್ವಯ ಶಾಸಕ ನಾರಾ ಭರತ್, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಪ್ರತಾಪ್ ರೆಡ್ಡಿ ಹಾಗೂ ನಾರಾ ಸೂರ್ಯನಾರಾಯರೆಡ್ಡಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್ನ, ದಿವಾಕರ್ ಹಾಗೂ ಮಾರುತಿ ಪ್ರಸಾದ್ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

