ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI President) ಅಧ್ಯಕ್ಷ ಸ್ಥಾನಕ್ಕೆ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ರೋಜರ್ ಬಿನ್ನಿ ಅವರಿಗೆ ಮುಂದಿನ ತಿಂಗಳು 70 ವರ್ಷ ತುಂಬಿ ಬಿಸಿಸಿಐ ಅಧ್ಯಕ್ಷ ಸ್ಧಾನದಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಸ್ಥೆಯ ಹಿರಿಯ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
1983ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ, ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಈ ವರ್ಷ ಜುಲೈ 19ರಂದು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಬಿಸಿಸಿಐನ ಸಂವಿಧಾನದ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ 70 ವರ್ಷಗಳ ವಯಸ್ಸಿನ ಮಿತಿ ಇದೆ. ಈ ನಿಯಮದಿಂದಾಗಿ ಬಿನ್ನಿ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಖಾಲಿ ಬೀಳುವ ಸ್ಥಾನವನ್ನು ತುಂಬಲು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ, ರಾಜೀವ್ ಶುಕ್ಲಾ ಅವರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲಿದ್ದು, ಬಿಸಿಸಿಐ ಹಂಗಾಮಿ ಮುಖ್ಯಸ್ಥರಾಗಿರುತ್ತಾರೆ.

