ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಆಶಸ್ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ಗೆದ್ದು ಬೀಗಿದೆ. ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ದು, ಎರಡೇ ದಿನಕ್ಕೆ ಪಂದ್ಯ ಮುಗಿದಿದೆ. ಗೆದ್ದರೂ ಆಸ್ಟ್ರೇಲಿಯಾಗೆ ಕೋಟಿ ಕೋಟಿ ನಷ್ಟ ಉಂಟಾಗಿದೆ.
ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಸಾಧನೆಯನ್ನು ಮಾಡಿದೆ. ಫಲಿತಾಂಶವು ಸರಣಿಯ ಮೇಲೆ ಪರಿಣಾಮ ಬೀರದಿದ್ದರೂ ಮೆಲ್ಬೋರ್ನ್ ಟೆಸ್ಟ್, ಆಸ್ಟ್ರೇಲಿಯಾ ಕ್ರಿಕೆಟ್‌ಗೆ (Cricket Australia) ಎರಡೆರಡು ಆಘಾತ ನೀಡಿದೆ. ನಾಲ್ಕನೇ ಪಂದ್ಯ ಸೋತ ಆಸ್ಟ್ರೇಲಿಯಾಗೆ ಕೋಟಿ ಕೋಟಿ ರೂ. ನಷ್ಟವಾಗಿದೆ.
ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ಕೇವಲ ಆರು ವಿಕೆಟ್‌ಗಳನ್ನು ಕಳೆದುಕೊಂಡು 175 ರನ್‌ಗಳ ಗುರಿ ಮುಟ್ಟಿತು. ಸೋಲಿನ ಹೊರತಾಗಿಯೂ, ಆಸ್ಟ್ರೇಲಿಯಾ ಆಶಸ್ ಸರಣಿಯನ್ನು ಗೆದ್ದರೂ ಸುಮಾರು 60 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ವರ್ಷದ ಅತ್ಯಂತ ಪ್ರಮುಖ ಪಂದ್ಯವಾಗಿದ್ದು, ಅತಿ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಮೊದಲ ದಿನದಂದು 94,000 ಕ್ಕೂ ಹೆಚ್ಚು ಪ್ರೇಕ್ಷಕರು ಎಂಸಿಜಿಗೆ ಆಗಮಿಸಿದ್ದರು. ಎರಡು ದಿನಗಳಲ್ಲಿ ಒಟ್ಟು 186,000 ಕ್ಕೂ ಹೆಚ್ಚು ಅಭಿಮಾನಿಗಳು ಪಂದ್ಯ ವೀಕ್ಷಿಸಿದ್ದರು. ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ಇದೇ ರೀತಿಯ ಜನಸಂದಣಿಯನ್ನು ನಿರೀಕ್ಷಿಸಲಾಗಿತ್ತು, ಈಗ ಪಂದ್ಯ ಮುಗಿದ್ದರಿಂದಾಗಿ ಟಿಕೆಟ್ ರದ್ದುಗೊಳಿಸಲಾಗಿದೆ. ಇದು ಟಿಕೆಟ್ ಮಾರಾಟದ ಮೇಲೆ ಮಾತ್ರವಲ್ಲದೆ, ಪ್ರಸಾರ ಹಕ್ಕುಗಳು, ಜಾಹೀರಾತು ಮತ್ತು ಇತರ ಮೂಲಗಳಿಂದ ಬರುವ ಆದಾಯದ ಮೇಲೂ ಪರಿಣಾಮ ಬೀರಿದೆ. ಆರ್ಥಿಕ ನಷ್ಟದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಮಂಡಳಿಗೆ ಇದು ದೊಡ್ಡ ಹೊಡೆತ ನೀಡಿದೆ. ಎರಡನೇ ಬಾರಿಗೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ ಇದು ಕ್ರಿಕೆಟ್ ಆಸ್ಟ್ರೇಲಿಯಾಗೆ ದೊಡ್ಡ ಹಿನ್ನಡೆಯಾಗಿದೆ.

