Site icon BosstvKannada

ಬಿಕ್ಲು ಶಿವ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್.. ರಚ್ಚು ಜೊತೆ ಕೊಲೆ ಆರೋಪಿ ನಂಟು? ಸೀರೆ, ಬಳೆ ಗಿಫ್ಟ್‌ ಕೊಟ್ಟಿದ್ಯಾಕೆ?

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್, ವಿವಾದಗಳಿಂದ ದೂರ ಇರುವ ನಟಿ.. ಯಾರು ಏನೇ ಅಂದ್ರೂ, ಏನೇ ಕಾಂಟ್ರವರ್ಸಿ ಮಾಡಿದ್ರೂ ತಲೆಕೆಡಿಸಿಕೊಳ್ಳದೇ ಕರಿಯರ್‌ನಲ್ಲಿ ಬ್ಯುಸಿಯಾಗಿರುವ ನಟಿಗೆ ಈಗ ವಿವಾದವೊಂದು ಥಳುಕು ಹಾಕಿಕೊಂಡಿದೆ. ಕೊಲೆಯೊಂದರ ಆರೋಪಿಯಿಂದ ಸೀರೆ, ಬಳೆ ಗಿಫ್ಟ್‌ ಪಡೆದುಕೊಂಡಿರುವ ಫೋಟೋಗಳು ವೈರಲ್‌ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ..

ಇತ್ತೀಚೆಗೆ‌ ಬೆಂಗಳೂರಿನ ಭಾರತಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಬಿಕ್ಲು ಶಿವನ ಮರ್ಡರ್‌ ಆಗಿತ್ತು. ಒಂದೂವರೆ ಎಕರೆ ಜಮೀನು ವಿಚಾರಕ್ಕೆ ಬಿಕ್ಲು ಶಿವನ ಹೆಣ ಉರುಳಿತ್ತು. ಈ ಕೊಲೆ ಕೇಸ್‌ ಹಿಂದೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಕೈವಾಡ ಇದೆ ಅಂತಾ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಜಗದೀಶ್‌ ಮೊದಲನೇ ಆರೋಪಿಯಾಗಿದ್ರೆ, ಭೈರತಿ ಬಸವರಾಜ್‌ 5ನೇ ಆರೋಪಿಯಾಗಿದ್ದಾರೆ.. ಅಲ್ಲದೇ ಎ1 ಜಗ್ಗದೀಶ್‌ ಸಹಚರರಾದ ಅನಿಲ್, ಅರುಣ್ ಹಾಗೂ ನವೀನ್‌ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೀಗ ನಟಿ ರಚಿತಾ ರಾಮ್‌ಗೆ ಮೊದಲನೇ ಆರೋಪಿ ಗಿಫ್ಟ್‌ ಕೊಟ್ಟಿದ್ದಾರೆ ಎನ್ನಲಾಗ್ತಿರೋ ವಿಚಾರ ಭಾರಿ ಸದ್ದು ಮಾಡುತ್ತಿದೆ…

ಬಿಕ್ಲು ಶಿವ ಕೊಲೆ ಪ್ರಕರಣ ಎ1 ಆಗಿರುವ ಜಗದೀಶ್‌ ಅಲಿಯಾಸ್‌ ಜಗ್ಗನ ಜೊತೆಗಿರುವ ರಚಿತಾ ರಾಮ್ ಫೋಟೋ ವೈರಲ್ ಆಗಿದೆ. ರಚಿತಾಗೆ ಜಗದೀಶ್ ಸೀರೆ ಹಾಗೂ ಒಡವೆ ಗಿಫ್ಟ್ ಕೊಟ್ಟಿದ್ದಾನೆ ಎನ್ನುವ ಆರೋಪ ಇದೆ. ಕ್ರೇಜಿ‌ಸ್ಟಾರ್ ರವಿಚಂದ್ರನ್, ರಾಧಿಕಾ ಕುಮಾರಸ್ವಾಮಿ, ಮೊದಲಾದವರು ನಟಿಸಿರೋ ರವಿ ಬೋಪಣ್ಣ ಸಿನಿಮಾ 2022ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಜಗದೀಶ್ ಸಹ ನಿರ್ಮಾಪಕನಾಗಿದ್ದ..‌ ಈ ಸಿನಿಮಾದಲ್ಲಿ ರಚಿತಾ ರಾಮ್ ಅತಿಥಿ ಪಾತ್ರ ಮಾಡಿದ್ದರು. ಆದರೆ, ಡಿಂಪಲ್‌ ಕ್ವೀನ್‌ ಸಂಭಾವನೆ ಪಡೆದಿರಲಿಲ್ಲ. ಹೀಗಾಗಿ ರವಿಚಂದ್ರನ್ ಅವರ ಪತ್ನಿ ಸೆಲೆಕ್ಟ್ ಮಾಡಿದ್ದ ಸೀರೆಯನ್ನು ರಚಿತಾ ಸ್ವೀಕರಿಸಿದ್ದರು. ರವಿಚಂದ್ರನ್ ಕೊಟ್ಟ ಉಡುಗೊರೆ ಇದಾಗಿದ್ದು, ಅದನ್ನು ರಚಿತಾ ಪ್ರೀತಿಯಿಂದ ಪಡೆದಿದ್ದರು. ಜಗದೀಶ್ ಕೂಡ ನಿರ್ಮಾಪಕನಾಗಿದ್ದರಿಂದ ಫೋಟೋದಲ್ಲಿ ಜೊತೆಗಿದ್ದ ಅಷ್ಟೇ ಹೊರತು ಇದು ಜಗ್ಗಿ ಕೊಟ್ಟಿರೋ ಉಡುಗೊರೆ ಅಲ್ಲ‌ ಅಂತಾ ರಚಿತಾ ರಾಮ್‌ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.

ಇನ್ನು, ಸಂಜು ವೆಡ್ಸ್‌ ಗೀತಾ 2 ಸಿನಿಮಾ ವಿಚಾರದಲ್ಲಿ ರಚಿತಾ ರಾಮ್‌ ವಿರುದ್ಧ ಚಿತ್ರತಂಡ ಗಂಭೀರ ಆರೋಪ ಮಾಡಿತ್ತು.. ಸಂಭಾವನೆ ಪಡೆದರೂ ರಚಿತಾ ರಾಮ್‌ ಸಿನಿಮಾ ಪ್ರಮೋಷನ್‌ಗೆ ಬರ್ತಿಲ್ಲ ಅಂತಾ ನಿರ್ದೇಶಕ ನಾಗಶೇಖರ್‌ ಹಾಗೂ ನಟ ಶ್ರೀನಗರ ಕಿಟ್ಟಿ ಆರೋಪಿಸಿದ್ದರು. ಈ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು.. ಈ ವಿವಾದ ತಣ್ಣಗಾಗುವ ಬೆನ್ನಲ್ಲೇ ಇದೀಗ ಕೊಲೆ ಆರೋಪಿ ಜತೆಗಿನ ಫೋಟೋ ವೈರಲ್‌ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ..

Exit mobile version