ಮೈಸೂರು: ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸಿಎಂ ಕುರ್ಚಿಯ ಗುದ್ದಾಟ ತಣ್ಣಗಾಗಿದೆ ಎಂದು ಭಾವಿಸಿದರೂ ಒಳಒಳಗೆ ಮಾತ್ರ ಅದು ಕುದಿಯುತ್ತಲೇ ಇದೆ. ಈಗ ಸಿಎಂ ಕುರ್ಚಿಯ ಕನಸಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ಸಮಯ ಹಾಗೂ ಸಂದರ್ಭ ಎಲ್ಲವನ್ನೂ ನಿರ್ಧರಿಸುತ್ತದೆ. ಈ ವಿಷಯದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಹೈಕಮಾಂಡ್ ತೀರ್ಮಾನಿಸಿದರೆ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ, ಈ ವಿಷಯದಲ್ಲಿ ನನ್ನನ್ನು ಎಳೆ ತರಬೇಡಿ ಎಂದಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ ಸಿಎಂ ಇದ್ದಾರೆ. ಸಿಎಂ, ಡಿಸಿಎಂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್ ಮಾತ್ರ ನಿರ್ಧರಿಸುತ್ತದೆ. ಈ ವಿಷಯದಲ್ಲಿ ಬಿಜೆಪಿ ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ನಾಯಕರು ಕೇವಲ ಭಾಷಣ ವೀರರು. ಅವರಿಗೆ ಜನರ ಯಾವ ಸಮಸ್ಯೆಗಳೂ ಅರ್ಥವಾಗುವುದಿಲ್ಲ. ಕೇಂದ್ರದಲ್ಲಿ ಸಂಸದರು ನಮ್ಮ ರಾಜ್ಯದ ಪರ ಯಾವತ್ತೂ ಧ್ವನಿ ಎತ್ತಿಲ್ಲ. ಬಿಜೆಪಿಯಲ್ಲೇ ಕಿತ್ತಾಟ, ಗೊಂದಲ ಇದೆ. ಆದರೆ, ನಮ್ಮಲ್ಲಿ ಇಲ್ಲ ಎಂದಿದ್ದಾರೆ.

