ಢಾಕಾ: ಬಾಂಗ್ಲಾದಲ್ಲಿ ಹಿಂದೂಗಳ (Hindu) ಮೇಲಿನ ಸರಣಿ ಹತ್ಯೆ ಮುಂದುವರಿದಿದೆ. ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆ ಮಾಡಿದ್ದಲ್ಲದೇ ಆಗುಂತಕರು, ಗ್ಯಾರೇಜ್ ಒಳಗೆ ಸುಟ್ಟು ಹಾಕಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ ಚಂಚಲ್ ಚಂದ್ರ ಭೌಮಿಕ್ ಸಜೀವ ದಹನವಾದ ವ್ಯಕ್ತಿ. ನಭೌಮಿಕ್ ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದವರು, ಕೆಲಸದ ನಿಮಿತ್ತ ನರಸಿಂಗ್ಡಿ ಜಿಲ್ಲೆಯಲ್ಲಿ ವಾಸವಿದ್ದ, ಕುಟುಂಬಕ್ಕೆ ಇವರೊಬ್ಬರೇ ಆಧಾರವಾಗಿದ್ದರು ಎನ್ನಲಾಗಿದೆ.
ಶುಕ್ರವಾರ ತಡರಾತ್ರಿ ಚಂಚಲ್ ಗ್ಯಾರೇಜ್ ಒಳಗೆ ಮಲಗಿದ್ದಾಗ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಗ್ಯಾರೇಜ್ನ ಶಟರ್ಗೆ ಹೊರಗಿನಿಂದಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬಹುಬೇಗನೆ ವ್ಯಾಪಿಸಿದ್ದರಿಂದ ಚಂಚಲ್ ಅಂಗಡಿಯೊಳಗೇ ಸಜೀವ ದಹನವಾಗಿದ್ದಾರೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದಾಳಿಕೋರರು ಗ್ಯಾರೇಜ್ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೃಶ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾಳಿಕೋರರನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

