ಬೆಂಗಳೂರು: ಬಡವರ ಪಾಲಿಗೆ ಧಕ್ಕಬೇಕಾಗಿದ್ದ ಅನ್ನಭಾಗ್ಯ ಅಕ್ಕಿ (Anna Bhagya Rice) ದಂಧೆಕೋರರ ಖಜಾನೆ ಸೇರುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾಂಗ್ರೆಸ್ ಮುಖಂಡನ ವಿರುದ್ಧ ಕೇಸ್ ದಾಖಲಾಗಿದೆ.
ಯಲಚೇನಹಳ್ಳಿ ಕಾಂಗ್ರೆಸ್ (Congress) ಮುಖಂಡ ಅಲೀಮ್ ಎಂಬಾತನ ವಿರುದ್ಧವೇ ಕೇಸ್ ದಾಖಲಾಗಿದೆ. ಅಲೀಮ್, ಬಿಪಿಎಲ್ ಕಾರ್ಡ್ ಇದ್ದವರಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎಂದು ಕೆಆರ್ಎಸ್ ಪಾರ್ಟಿ ಆರೋಪ ಮಾಡಿದೆ. ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಸಂದರ್ಭದಲ್ಲೇ ದಾಳಿ ಮಾಡಿದ ಕೆಆರ್ ಎಸ್ ಮುಖಂಡರು ಅಕ್ಕಿ ಸಮೇತ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಆರ್ಎಸ್ ಪಕ್ಷದ ಮುಖಂಡನ ಮನೆ ಸುತ್ತಮುತ್ತ ಅಲೀಮ್, ಹುಡುಗರನ್ನು ಬಿಟ್ಟು ಹಲ್ಲೆ ಮಾಡಲು ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಸೀಜ್ ಮಾಡಲಾದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಬಿಡಿಎ ಕಚೇರಿಗಳಲ್ಲಿ ದಲ್ಲಾಳಿಯಾಗಿಯೂ ಅಲೀಮ್ ತನ್ನ ಕೈ ಚಳಕ ತೋರಿಸುತ್ತಿದ್ದ ಎನ್ನಲಾಗಿದೆ. ಈಗ ಅಲೀಮ್ ಸೇರಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

