Site icon BosstvKannada

5 ಕೋಟಿ ಜನರ ಹಸಿವು ನೀಗಿಸಿದ ಅನ್ನಭಾಗ್ಯ : ಅಕ್ಷಯ ಪಾತ್ರೆಯಾದ ಯೋಜನೆ

ಬೆಂಗಳೂರು, ಫೆ.19: ರಾಜ್ಯದಲ್ಲಿ ಜನರಿಗೆ ಮುಖ್ಯವಾಗಿ ಬೇಕಾದ ಮೂಲಸೌಕರ್ಯ ಅಂದ್ರೆ ಅದು ಆಹಾರ. ಅದೆಷ್ಟೋ ಜನರು ಬಡತನ ಮತ್ತು ಅಪೌಷ್ಟಿಕತೆಯಿಂದ ನರಳಾಡಿದ್ದು ಉಂಟು. ಆದ್ರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಈ ತೊಂದರೆ ಕಣ್ಮರೆಯಾಗಿದೆ. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಅದೆಷ್ಟೋ ಯೋಜನೆಗಳಲ್ಲಿ ಅತ್ಯಂತ ಪ್ರಭಾವ ಬೀರಿದ ಯೋಜನೆ ಅಂದ್ರೆ ಅದು ಅನ್ನಭಾಗ್ಯ ಯೋಜನೆ. ಮೂಲತಃ 2013 ರಲ್ಲೇ ಈ ಯೋಜನೆ ಪ್ರಾರಂಭವಾಗಿತ್ತು. ಆದ್ರೆ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಮತ್ತೊಮ್ಮೆ ಅನ್ನಭಾಗ್ಯ ಯೋಜನೆಯನ್ನು ವಿಶೇಷವಾಗಿ ಜಾರಿಗೊಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದ್ದು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಜೊತೆಗೆ ದೇಶದಲ್ಲೇ ಜಾರಿಗೊಂಡ ಹಲವು ಯೋಜನೆಗಳಲ್ಲಿ ಈ ಯೋಜನೆ ಅತ್ಯಂತ ಜನಪ್ರಿಯವಾಗಿದೆ.

ವಾರ್ಷಿಕ 25 ಲಕ್ಷ ಮೆಟ್ರಿಕ್‌ ಟನ್‌ ಆಹಾರಧಾನ್ಯ ಪೂರೈಕೆ:
ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಕಾಂಗ್ರೆಸ್‌ ಸರ್ಕಾರ ಜುಲೈ 9, 2023 ರಂದು ಅನ್ನಭಾಗ್ಯ ಯೋಜನೆಯನ್ನ ಜಾರಿಗೊಳಿಸಿದೆ. ಅಂದಿನಿಂದ ಇಲ್ಲಿವರೆಗೆ ಅದೆಷ್ಟೇ ಬಡವರ ಜೀವನಾಡಿಯಾಗಿ ಈ ಯೋಜನೆ ಕಾರ್ಯ ನಿರ್ವಹಿಸಿದೆ. 5 ಕೋಟಿಗೂ ಅಧಿಕ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ವಾರ್ಷಿಕವಾಗಿ 25,00,000 ಮೆಟ್ರಿಕ್‌ ಟನ್‌ಗೂ ಅಧಿಕ ಆಹಾರಧಾನ್ಯಗಳನ್ನು ಒದಗಿಸಲಾಗ್ತಿದೆ. ತಲಾ 10 ಕೆಜಿ ಉಚಿತ ಅಕ್ಕಿ ಮೂಲಕ ಅನ್ನಭಾಗ್ಯ ಯೋಜನೆ ಮನೆಮನೆಗೂ ತಲುಪುತ್ತಿದೆ. ಕಾಂಗ್ರೆಸ್‌ ಸರ್ಕಾರ ಈ ಯೋಜನೆಗಾಗಿ 17,495 ಕೋಟಿ ರೂ. ಖರ್ಚು ಮಾಡಿದೆ. ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಪ್ರತಿನಿತ್ಯ ಆಹಾರದ ಭದ್ರತೆಯನ್ನು ಒದಗಿಸುತ್ತಿರುವ ಕಾರಣ ಬಡವರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಜನರು ಆಹಾರಕ್ಕಾಗಿ ಮಾಡುವ ಖರ್ಚನ್ನ ಉಳಿತಾಯ, ತುರ್ತು ಅಗತ್ಯಗಳಿಗೆ ಬಳಸಲು ಅನ್ನಭಾಗ್ಯ ಯೋಜನೆ ಸ್ಫೂರ್ತಿಯಾಗಿದೆ. ಪೌಷ್ಟಿಕಾಂಶ ಆಹಾರ ಪದಾರ್ಥಗಳ ಮೂಲಕ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಆರೋಗ್ಯಕ್ಕೆ ಉತ್ತಮ ಕೊಡುಗೆಯಾಗಿದೆ. ಅಷ್ಟೇ ಅಲ್ಲ ವಿವಿಧ ಸಾಮಾಜಿಕ-ಆರ್ಥಿಕ ವರ್ಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ಪ್ರೇರೇಪಿಸುತ್ತಿದೆ. ಕೃಷಿ ಚಟುವಟಿಕೆಗಳು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸುತ್ತಿದೆ. ಒಟ್ಟಾರೆ ಬಡವರ ಪಾಲಿನ ಅಕ್ಷಯ ಪಾತ್ರೆಯಾಗಿ ಅನ್ನಭಾಗ್ಯ ಯೋಜನೆ ಕೆಲಸ ಮಾಡುತ್ತಿರೋದು ಹೆಗ್ಗಳಿಕೆ.

Exit mobile version