Site icon BosstvKannada

ಸಿನಿಮಾ ದಿಗ್ಗಜರಿಂದ ಹದಿಹರೆಯದವರಿಗೆ ಅನಿಮೇಷನ್ ಶಿಕ್ಷಣ ಶಿಬಿರ

ಬೆಂಗಳೂರು, ಏ.06: ನಿಮ್ಮ ಮಗುವಿನಲ್ಲಿರುವ ಸೃಜನಶೀಲತೆಗೆ ಸಿನೆಮಾ ಲೋಕದ ದಿಗ್ಗಜರ ಮಾರ್ಗದರ್ಶನ ಸಿಕ್ಕರೆ ಹೇಗಿರುತ್ತದೆ? ಅಂತಹ ಒಂದು ಅದ್ಭುತ ಅವಕಾಶವನ್ನು ʻಪರಮ್‌ ಫೌಂಡೇಶನ್’ ಇದೀಗ ಹದಿಹರೆಯದವರಿಗಾಗಿ (11-16 ವರ್ಷದೊಳಗಿನ) ತಂದಿದೆ. ಕೇವಲ ತಾಂತ್ರಿಕ ಕಲಿಕೆಯಲ್ಲದೆ, ಹಳೆಯ ನೀತಿ ಕಥೆಗಳಿಗೆ ಆಧುನಿಕ ಸಮಾಜದ ಸವಾಲುಗಳನ್ನು ಬೆರೆಸಿ ಕಿರುಚಿತ್ರ ತಯಾರಿಸುವ ವಿನೂತನ ‘ಸ್ಟಾಪ್ ಮೋಷನ್ ಅನಿಮೇಷನ್’ ಶಿಬಿರ ಏಪ್ರಿಲ್ 20ರಿಂದ ಆರಂಭವಾಗಲಿದೆ. ಈ ಶಿಬಿರದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಚಿತ್ರರಂಗ ಹಾಗೂ ಕಲಾ ಲೋಕದ ಖ್ಯಾತನಾಮರಾದ ರಘು ದೀಕ್ಷಿತ್ (ಸಂಗೀತ), ಎಂ.ಡಿ. ಪಲ್ಲವಿ ಮತ್ತು ಶ್ವೇತಾ (ಧ್ವನಿ ಸಂಯೋಜನೆ), ಕಾರ್ತಿಕ್ ಸರಗೂರು (ದೃಶ್ಯಕಾವ್ಯ) ಹಾಗೂ ಸಿದ್ಧಾರ್ಥ್ ಭರತ್ (ವಿಜ್ಞಾನ) ಅವರು ವಿದ್ಯಾರ್ಥಿಗಳ ಜೊತೆ ನೇರವಾಗಿ ಸಂವಾದ ನಡೆಸಿ ಮಾರ್ಗದರ್ಶನ ನೀಡುವುದು.

ಯಾವ್ಯಾವ ಸೆಲೆಬ್ರಿಟಿಯಿಂದ ಏನು ಕಲಿಕೆ?:
ರಘು ದೀಕ್ಷಿತ್ : ತಮ್ಮ ವಿಶಿಷ್ಟ ಸಂಗೀತದ ಮೂಲಕ ಸಿನೆಮಾದಲ್ಲಿ ಭಾವನೆಗಳನ್ನು (Sound & Mood) ತುಂಬುವ ಕಲೆ ಕಲಿಸಲಿದ್ದಾರೆ.
ಎಂ.ಡಿ. ಪಲ್ಲವಿ ಮತ್ತು ಶ್ವೇತಾ: ಕಥೆಯ ಪಾತ್ರಗಳಿಗೆ ಪ್ರಾಣ ತುಂಬುವ ಧ್ವನಿ ಸಂಯೋಜನೆ (Voice & Performance) ಕುರಿತು ತರಬೇತಿ ನೀಡಲಿದ್ದಾರೆ.
ಕಾರ್ತಿಕ್ ಸರಗೂರು: ದೃಶ್ಯಕಾವ್ಯವನ್ನು ಕಟ್ಟಿಕೊಡುವ ಪರಿ ಹಾಗೂ ಇತಿಹಾಸದ ಮಹತ್ವವನ್ನು (Visual Storytelling) ವಿವರಿಸಲಿದ್ದಾರೆ.
ಸಿದ್ಧಾರ್ಥ್ ಭರತ್: ಅನಿಮೇಷನ್‌ನಲ್ಲಿ ವಿಜ್ಞಾನದ ಆವಿಷ್ಕಾರಗಳನ್ನು (Science in Art) ಹೇಗೆ ಅಳವಡಿಸಬಹುದು ಎಂಬ ವಿಭಿನ್ನ ನೋಟ ನೀಡಲಿದ್ದಾರೆ.
ರಾಬಿನ್ ಸ್ಟ್ಯಾಪ್ಲಿ : ಅಮೆರಿಕಾದ ರಾಷ್ಟ್ರೀಯ ಅನಿಮೇಷನ್ ವಸ್ತುಸಂಗ್ರಹಾಲಯದ ರಾಬಿನ್ ಸ್ಟ್ಯಾಪ್ಲಿ ಅವರು ಕೂಡ ಈ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.

ಮೂರು ವಾರಗಳ ರೋಚಕ ಸಿನಿಮಾ ಪಯಣ:
ಮೊದಲನೇ ವಾರ (ಫೌಂಡೇಶನ್): ಈ ಹಂತವು ಅನಿಮೇಷನ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಭದ್ರ ಬುನಾದಿಯನ್ನು ಹಾಕಿಕೊಡಲಿದೆ. ಇಲ್ಲಿ ವಿದ್ಯಾರ್ಥಿಗಳು ಸ್ಟಾಪ್ ಮೋಷನ್ ಅನಿಮೇಷನ್‌ನ ಮೂಲಭೂತ ತತ್ವಗಳನ್ನು ಅತ್ಯಂತ ಆಳವಾಗಿ ಕಲಿಯಲಿದ್ದಾರೆ. ಕೇವಲ ಡಿಜಿಟಲ್ ಜಗತ್ತಷ್ಟೇ ಅಲ್ಲದೆ, ಫ್ಲಿಪ್‌ಬುಕ್ ಮತ್ತು ಫೆನಾಕಿಸ್ಟೋಸ್ಕೋಪ್‌ಗಳಂತಹ ಸಾಂಪ್ರದಾಯಿಕ ಅನಿಮೇಷನ್ ತಂತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಲಿದ್ದಾರೆ. ಅಷ್ಟೇ ಅಲ್ಲದೆ, ವಸ್ತು ಆಧಾರಿತ (Object-based) ಅನಿಮೇಷನ್‌ಗೆ ಅಗತ್ಯವಿರುವ ಭೌತಿಕ ಪರಿಸರ ಮತ್ತು DIY ಸ್ಟುಡಿಯೋವನ್ನು ತಾವೇ ಸ್ವತಃ ನಿರ್ಮಿಸುವ ತಾಂತ್ರಿಕ ಕಲೆಯನ್ನು ಇಲ್ಲಿ ಮೈಗೂಡಿಸಿಕೊಳ್ಳಲಿದ್ದಾರೆ.

ಎರಡನೇ ವಾರ (ಮೆಂಟರ್‌ಶಿಪ್): ಈ ವಾರವು ಕಥಾವಸ್ತು ಮತ್ತು ಸೃಜನಶೀಲತೆಗೆ ಮೀಸಲಾಗಿದ್ದು, ಮೇಲಿನ ಸೆಲೆಬ್ರಿಟಿ ತಜ್ಞರೊಂದಿಗೆ ನೇರ ಸಂವಾದಗಳು ನಡೆಯಲಿವೆ. ರಘು ದೀಕ್ಷಿತ್, ಎಂ.ಡಿ. ಪಲ್ಲವಿ ಮತ್ತು ಕಾರ್ತಿಕ್ ಸರಗೂರು ಅವರಂತಹ ದಿಗ್ಗಜರು ಕಥೆಯ ಭಾವನೆಗಳು, ಧ್ವನಿ ಮತ್ತು ದೃಶ್ಯ ರೂಪಕಗಳ ಕುರಿತು ಸ್ಫೂರ್ತಿ ನೀಡಲಿದ್ದಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಹಳೆಯ ನೀತಿ ಕಥೆಗಳಿಗೆ ಆಧುನಿಕ ‘ಟ್ವಿಸ್ಟ್’ ನೀಡಿ ಸ್ಕ್ರಿಪ್ಟ್ ಸಿದ್ಧಪಡಿಸಲಿದ್ದಾರೆ. ವಿಜ್ಞಾನ ತಜ್ಞರ ಜೊತೆಗಿನ ಚರ್ಚೆಗಳು ಈ ಕಥೆಗಳಲ್ಲಿ ನಾವೀನ್ಯತೆ ತುಂಬಲು ಸಹಾಯ ಮಾಡಲಿವೆ.

ಮೂರನೇ ವಾರ (ಫೈನಲ್ ಕಟ್): ಇದು ಅಂತಿಮ ಚಿತ್ರೀಕರಣ ಮತ್ತು ಸಂಕಲನದ ಹಂತ. ಚಿತ್ರೀಕರಣಗೊಂಡ ನೂರಾರು ಫ್ರೇಮ್‌ಗಳನ್ನು ಒಟ್ಟುಗೂಡಿಸಿ ಸಿನೆಮಾದ ರೂಪ ನೀಡುವ ಸಂಕೀರ್ಣವಾದ ‘ಪೋಸ್ಟ್-ಪ್ರೊಡಕ್ಷನ್’ ಕೆಲಸಗಳು ಇಲ್ಲಿ ನಡೆಯುತ್ತವೆ. ಸೌಂಡ್ ಡಿಸೈನ್ ಮತ್ತು ಅಂತಿಮ ಎಡಿಟಿಂಗ್ ಮೂಲಕ ವಿದ್ಯಾರ್ಥಿಗಳು ತಯಾರಿಸಿದ ಕಲ್ಪನೆಗಳು ಒಂದು ಪರಿಪೂರ್ಣವಾದ ಫೀಚರ್ ಫಿಲ್ಮ್ ರೂಪ ಪಡೆದು ಪ್ರದರ್ಶನಕ್ಕೆ ಸಿದ್ಧವಾಗಲಿವೆ.

ವಿವರಗಳು ಮತ್ತು ಸಮಯ:
ಶಿಬಿರವನ್ನು “ಬೆಂಗಳೂರು ನಗರದ ಜಯನಗರದಲ್ಲಿರುವ ParSEC ಗ್ಯಾಲರಿ”ಯಲ್ಲಿ ಪರಮ್ ಫೌಂಡೇಶನ್ ವತಿಯಿಂದ ಆಯೋಜನೆ ಮಾಡಲಾಗಿದ್ದು, ಏಪ್ರಿಲ್ 20ರಿಂದ ಮೇ 8 ರವರೆಗೆ ನಡೆಯಲಿದೆ.
ಈ ವೇಳೆಯಲ್ಲಿ ಸೋಮವಾರದಿಂದ ಶುಕ್ರವಾರ, ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ (ತಜ್ಞರ ಸೆಷನ್ ಬೆಳಗ್ಗೆ 11 ರಿಂದ 12 ರವರೆಗೆ) ಜರುಗಲಿವೆ. ಮೇ 9ರಂದು ನಡೆಯಲಿರುವ ಗ್ರ್ಯಾಂಡ್ ಶೋಕೇಸ್‌ನಲ್ಲಿ ಪೋಷಕರು, ಪ್ರೇಕ್ಷಕರ ಸಮ್ಮುಖದಲ್ಲಿ ಮಕ್ಕಳೇ ಸಿದ್ಧಪಡಿಸಿದ ಈ ಅದ್ಭುತ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ: Paramfoundation.org ಹಾಗೂ 84312 66867 ಸಂಪರ್ಕಿಸಬಹುದು.

Exit mobile version