ಬೆಂಗಳೂರು, ಜ.28: ಮಹಾರಾಷ್ಟ್ರದ ಚತುರ… ಶಿವಾಜಿ ನಾಡಿನ ಪ್ರಭಾವಿ ನಾಯಕ ಎಂದೇ ಫೇಮಸ್ ಆಗಿದ್ದ ಅಜಿತ್ ಪವಾರ್ ಈಗ ದುರಂತ ಅಂತ್ಯ ಕಂಡಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದ್ದು, ಡಿಸಿಎಂ ಅಜಿತ್ ಪವಾರ್ ಸೇರಿ 5 ಜನರು ದುರ್ಮರಣ ಹೊಂದಿದ್ದಾರೆ. ಆದ್ರೆ, ಅವರ ರಾಜಕೀಯ ಬದುಕೇ ಒಂದು ರೋಚಕ ಪಯಣ.. ಅವರು ಕೈಗೊಂಡ ನಿರ್ಧಾರಗಳು ಈಗಲೂ ಚರ್ಚೆ ಹುಟ್ಟು ಹಾಕುತ್ತಿವೆ.
ಹೌದು.. ಅಜಿತ್ ಪವಾರ್ ಬೇರೆ ಯಾರೂ ಅಲ್ಲ.. ಭಾರತೀಯ ರಾಜಕೀಯ ಚಾಣಕ್ಯ, ಮಹಾರಾಷ್ಟ್ರದಲ್ಲಿ ದೊಡ್ಡ ಹೆಸರು ಮಾಡಿರುವ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಸಹೋದರನ ಮಗ.. 1959 ಜುಲೈ 22 ರಂದು ಮಹಾರಾಷ್ಟ್ರದ ಡಿಯೋಲಾಲಿ ಪ್ರವರ ಪ್ರದೇಶದಲ್ಲಿ ಜನಿಸಿದ್ದ ಅಜಿತ್ ಪವಾರ್, ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ರು. 21ನೇ ವಯಸ್ಸಿನಲ್ಲೇ ರಾಜಕೀಯ ರುಚಿ ಕಂಡಿದ್ದ ಅಜಿತ್ ಪವಾರ್, 45 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಅನುಭವಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯದ ಇತಿಹಾಸದಲ್ಲಿ ಹಲವು ಬಾರಿ ಸಚಿವರಾಗಿದ್ದ ಅಜಿತ್ ಪವಾರ್, 5 ಬಾರಿ ಉಪಮುಖ್ಯಮಂತ್ರಿ ಆಗುವ ಮೂಲಕ ಹೊಸ ದಾಖಲೆ ಬರೆದು ಅಜಿತ್ ಪವಾರ್ ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಅದು 2019ರ ಸಮಯ.. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅತಂತ್ರ ಫಲಿತಾಂಶ ಬಂದು ಮೈತ್ರಿ ಸರ್ಕಾರ ರಚನೆ ಆಗಿತ್ತು.. ಅಜಿತ್ ಪವಾರ್ ಅವರು, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಭಾಗವಾಗಿದ್ದರು. ಎನ್‌ಪಿಸಿ ಜೊತೆಗೆ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಿವಸೇನೆ ಜೊತೆಗೂಡಿ ಮೈತ್ರಿ ಸರ್ಕಾರ ನಡೆಸುತ್ತಿದ್ದವು. ಕೆಲಕಾಲ ಆಡಳಿತ ನಡೆಸಿದ್ದ ಮಹಾಘಟಬಂಧನ್, ರಾಜಕೀಯ ಕ್ಷಿಪ್ರ ಕ್ರಾಂತಿಗೆ ಬಲಿಯಾಗಬೇಕಾಯಿತು. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಪತನ ಕಂಡಿತು. ಮೈತ್ರಿ ಬಣದ ಶಾಸಕರೆಲ್ಲಾ ಎನ್‌ಡಿಎ ಮೈತ್ರಿ ಸೇರಿ ಬಿಜೆಪಿ ಸರ್ಕಾರ ರಚನೆಯಾಯಿತು. ಆಗ ಶರದ್ ಪವಾರ್ ಸಹೋದರನ ಪುತ್ರ ಅಜಿತ್ ಪವಾರ್ ಕೂಡ ಚಿಕ್ಕಪ್ಪನ ಪಕ್ಷ ಬಿಟ್ಟು ಬಿಜೆಪಿಗೆ ಹೊರಟು ನಿಂತರು. ಶರದ್ ಪವಾರ್ ಎಷ್ಟೇ ಮನವೊಲಿಸಿದರೂ ಕೇಳದೇ, ಅಜಿತ್ ತಮ್ಮ ಚಿಕ್ಕಪ್ಪನನ್ನೇ ಎದುರು ಹಾಕಿಕೊಂಡಿದ್ದರು. ಎನ್‌ಸಿಪಿ ಮುಖ್ಯಸ್ಥ ಮತ್ತು ಅನುಭವಿ ರಾಜಕಾರಣಿಯೂ ಆಗಿರುವ ಶರದ್ ಪವಾರ್ ಅವರ ಆಜ್ಞೆಯನ್ನೇ ಮೀರಿ ಹೊಸ ಹೆಜ್ಜೆ ಇಟ್ಟಿದ್ದರು. 2019ರ ಸಂದರ್ಭದಲ್ಲಿ ತಮ್ಮ ಚಿಕ್ಕಪ್ಪನ ಎನ್‌ಸಿಪಿ ಪಕ್ಷವನ್ನೇ ಇಬ್ಭಾಗ ಮಾಡಿ ಬಿಜೆಪಿ ಜೊತೆಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಜಕೀಯದಲ್ಲಿ ಆಗಾಗ ಚರ್ಚೆಗೆ ಗ್ರಾಸವಾಗುತ್ತದೆ. ಕರ್ನಾಟಕ ರಾಜಕಾರಣದಲ್ಲೂ ಬೆಳವಣಿಗೆಯ ಚರ್ಚೆಗಳು ನಡೆದಾಗ, ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಅಜಿತ್ ಪವಾರ್ ಇದ್ದಾರೆ ಅಂತಾ ರಾಜಕಾರಣಿಗಳು ಆಗಾಗ ಹೇಳಿರೋದು ಎಲ್ಲರಿಗೂ ಗೊತ್ತಿದೆ.
ಇನ್ನೊಂದು ನೋವಿನ ಸಂಗತಿ ಎಂದರೆ ಅಜಿತ್ ಪವಾರ್ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲೇ ಜೀವ ಬಿಟ್ಟಿರೋದು.. ಹೌದು.. ಅಜಿತ್ ಪವಾರ್ ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1995, 1999, 2004, 2009, 2014 ಮತ್ತು 2019ರ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಭವಿಷ್ಯ ಬಲಪಡಿಸಿಕೊಂಡಿದ್ದರು. ಆದ್ರೀಗ ಚುನಾವಣೆಯ ಕಾರಣಕ್ಕೆ ಮುಂಬೈನಿಂದ ಬಾರಾಮತಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ರು. ಇನ್ನೇನು ವಿಮಾನ ಲ್ಯಾಂಡಿಂಗ್ ಆಗಬೇಕು ಅನ್ನೋವಷ್ಟರಲ್ಲೇ ತುರ್ತು ಭೂ ಸ್ಪರ್ಶಿಸಿ ಪತನಗೊಂಡಿದೆ. ಈ ವೇಳೆ, ಇಬ್ಬರು ಪೈಲಟ್‌ಗಳು, ಇಬ್ಬರು ಪಿಎಗಳ ಜೊತೆ ಅಜಿತ್ ಪವಾರ್ ದಹನಗೊಂಡಿದ್ದು, ಕುಟುಂಬಸ್ಥರು, ಕಾರ್ಯಕರ್ತರಲ್ಲಿ ದುಃಖದ ಕಾರ್ಮೋಡ ಆವರಿಸಿದೆ.