ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತ, ದೇಶವನ್ನು ದುಃಖದಲ್ಲಿ ಮುಳುಗಿಸಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರು ಇಂದು (ಜೂನ್ 13-ಶುಕ್ರವಾರ) ಅಹಮದಾಬಾದ್ಗೆ ಭೇಟಿ ನೀಡಿದ್ದು, ವಿಮಾನ ಅಪಘಾತ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಹೊಸದಿಲ್ಲಿಯಿಂದ ಅಹಮದಾಬಾದ್ಗೆ ಬಂದಿಳಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಪ್ರಧಾನಿ ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸಾಥ್ ನೀಡಿದರು. ಈ ವೇಳೆ ತೀವ್ರ ದುಃಖಿತರಾದಂತೆ ಕಂಡುಬಂದ ಪ್ರಧಾನಿ ಮೋದಿ, ಅಧಿಕಾರಿಗಳೊಂದಿಗೆ ಮಾತನಾಡಿ ಘಟನೆಯ ಮಾಹಿತಿ ಪಡೆದರು. ಅಪಘಾತ ನಡೆದ ಸ್ಥಳ ಮತ್ತು ಅಪಘಾತದಿಂದ ಹಾನಿಗೊಳಗಾದ ಹಾಸ್ಟೇಲ್ ಪ್ರದೇಶವನ್ನು ಪ್ರಧಾನಿ ಮೋದಿ ಪರಿಶೀಲಿಸಿದರು. ಈ ವೇಳೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳಿಂದ ಪ್ರಧಾನಿ ಮೋದಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
#WATCH | PM Modi visited the #AirIndiaCrash site and assessed the ground situation today.
— ANI (@ANI) June 13, 2025
(Video source: DD) pic.twitter.com/Mamim5HgBm
ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಧಾನಿ ಮೋದಿ, ಈ ದುರಂತದಿಂದ “ದಿಗ್ಭ್ರಮೆಗೊಂಡಿದ್ದೇನೆ” ಎಂದು ನಿನ್ನೆ ಹೇಳಿದ್ದರು. “ಈ ದುರ್ಘಟನೆಯ ಬಗ್ಗೆ ಮಾತನಾಡಲು ನನಗೆ ಪದಗಳು ಸಿಗುತ್ತಿಲ್ಲ. ಇದು ನನ್ನ ಹೃದಯವನ್ನು ಘಾಸಿಗೊಳಿಸಿದೆ” ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಟ್ವೀಟ್ ಮಾಡಿದ್ದರು.
ಅಪಘಾತ ಸಂಭವಿಸಿದ ಬಳಿಕ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ತಕ್ಷಣ ಅಹಮದಾಬಾದ್ಗೆ ತೆರಳುವಂತೆ ಸೂಚನೆ ನೀಡಿದ್ದರು.
ಅಲ್ಲದೇ, ದುರಂತದಲ್ಲಿ ಪವಾಡ ಸದೃಶದಂತೆ ಪಾರಾದ ಓರ್ವ ಪ್ರಯಾಣಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಪ್ರಯಾಣಿಕ ರಮೇಶ್ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ, ವಿಮಾನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಹಾಸ್ಟೇಲ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

