ಗುವಾಹಟಿ: ಆನೆಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಪರಿಣಾಮ 8 ಆನೆಗಳು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.
ಈ ಘಟನೆ ಆಸ್ಸಾಂನ ಹೊಜೈ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸಾಯಿರಾಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಆನೆ(Elephant)ಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಲ್ಲದೇ, ಈ ಘಟನೆಯಿಂದಾಗಿ ಐದು ಬೋಗಿಗಳು ಕೂಡ ಹಳಿ ತಪ್ಪಿರುವ ಕುರಿತು ವರದಿಯಾಗಿದೆ. ಹೀಗಾಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎನ್ನಲಾಗಿದೆ. ಈ ಕುರಿತು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಕಾರ್ಯಾಚರಣೆ ನಡೆದಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ರೈಲು ಅಧಿಕಾರಿಗಳು, ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಾಯಿರಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮಿಜೋರಾಂನ ಸಾಯಿರಾಂಗ್ ಅನ್ನು ಐಜ್ವಾಲ್ ಬಳಿ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನೊಂದಿಗೆ ಸಂಪರ್ಕಿಸುತ್ತದೆ. ಅಪಘಾತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿ.ಮೀ ದೂರದಲ್ಲಿ ಇದೆ. ಹಳಿಗಳ ಮೇಲೆ ಹಿಂಡು ಇರುವುದನ್ನು ಗಮನಿಸಿದ್ದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರೂ ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

