ಮಹಿಳಾ ಕ್ರಿಕೆಟ್ ನ ಟಿ20 ಶ್ರೇಯಾಂಕ್ ಬಿಡುಗಡೆಯಾಗಿದ್ದು, ಭಾರತೀಯ ಪ್ರತಿಭಾನ್ವಿತ ಆಟಗಾರ್ತಿ ಸ್ಮೃತಿ ಮಂಧಾನ ಮೊದಲ ಸ್ಥಾನ ಕಳೆದುಕೊಂಡಿದ್ದಾರೆ. ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ.
ದೀಪ್ತಿ ಶರ್ಮಾ ಇದೇ ಮೊದಲ ಬಾರಿಗೆ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಬೌಲರ್ ಪಟ್ಟ ಅಲಂಕರಿಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದಿದ್ದ ದೀಪ್ತಿ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಐರ್ಲೆಂಡ್ ವಿರುದ್ಧದ ತವರು ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಶತಕ ಬಾರಿಸುವುದರ ಮೊಲಕ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಅಜೇಯ ಅರ್ಧಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗಸ್ ಟಿ20 ಬ್ಯಾಟರ್ಗಳ ಶ್ರೇಯಾಂಕದಲ್ಲಿ ಐದು ಸ್ಥಾನಗಳ ಜಿಗಿತದೊಂದಿಗೆ ಅಗ್ರ 10 ರಲ್ಲಿ ಅಂದರೆ ಒಂಬತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸ್ಮೃತಿ ಮಂಧಾನ ಮೂರನೇ ಸ್ಥಾನದಲ್ಲಿ ಮತ್ತು ಶಫಾಲಿ ವರ್ಮಾ ಹತ್ತನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್‌ನಲ್ಲಿ, ಅರುಂಧತಿ ರೆಡ್ಡಿ ಕೂಡ ಐದು ಸ್ಥಾನಗಳ ಏರಿಕೆ ಕಂಡು 36ನೇ ಸ್ಥಾನ ತಲುಪಿದ್ದಾರೆ.

