ಕಲಬುರಗಿ: ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನು ಖುಶಿ ಪಡಿಸುವುದಕ್ಕಾಗಿ ಖದೀಮನಾಗಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿ ಹಾಗೂ ಆತನೊಂದಿಗೆ ಮತ್ತೋರ್ವನನ್ನು ಬಂಧಿಸಿದ್ದಾರೆ. ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಖದೀಮ ಪ್ರಿಯಕರನಾಗಿದ್ದರೆ, ಆತನಿಗೆ ಸಹಾಯ ಮಾಡಿದ್ದ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಯಾಗಿರುವ ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ ತನ್ನೊಂದಿಗೆ ಲಿವ್ ಇನ್ (Live in Relationship) ಸಂಬಂಧ ಹೊಂದಿದ್ದ ಗೆಳತಿಯ ಆಸೆ ಪೂರೈಸುವುದಕ್ಕಾಗಿ ಅಡ್ಡ ಹಾದಿ ಹಿಡಿದಿದ್ದ ಎನ್ನಲಾಗಿದೆ.
ಈ ಖದೀಮರಿಬ್ಬರು ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹೆದರಿಸಿ, ಹಲ್ಲೆ ಮಾಡಿ ಚಿನ್ನಾಭರಣ ಸುಲಿಗೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 7.62 ಲಕ್ಷ ರೂ. ಮೌಲ್ಯದ 61 ಗ್ರಾಂ ಚಿನ್ನಾಭರಣ, 600 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಕಲ್ಲಪ್ಪ ಅಲಿಯಾಸ್ ಸಂಜು ಕೂಡ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗದೆ. ಆದರೆ, ಈತ ಮಹಿಳೆಯೊಬ್ಬಳ ಜೊತೆ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್‌ನಲ್ಲಿದ್ದ. ಹೀಗಾಗಿ ಆಕೆಯೊಂದಿಗೆ ಮೋಜು ಮಸ್ತಿ ಮಾಡಲು ಹಣ ಕಡಿಮೆಯಾದಾಗ ಕಳ್ಳತನದ ಹಾದಿ ಹಿಡಿದಿದ್ದ ಎನ್ನಲಾಗಿದೆ. ಹೀಗಾಗಿಯೇ ಕೂಲಿ ಮಾಡುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಹೆದರಿಸಿ ದೋಚಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಅಡ್ಡ ಹಾದಿ ಹಿಡಿದು ಕಂಬಿಯ ಹಿಂದೆ ಹೋಗಿದ್ದಾನೆ.

