ಬೆಂಗಳೂರು : ಮನೆಯಲ್ಲಿ ಗ್ಯಾಸ್ ಗೀಸರ್(Gas Geyser) ಸೋರಿಕೆಯಿಂದಾಗಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ವಿವಾಹಿತೆ (Newlywed Death) ಭೂಮಿಕಾ(24) ಸಾವನ್ನಪ್ಪಿರುವ ದುರ್ದೈವಿ. ಈ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆ ಕಳೆದ ನಾಲ್ಕೈದು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಭೂಮಿಕಾ ಸ್ನಾನಕ್ಕೆಂದು ತೆರಳಿದಾಗ ಗ್ಯಾಸ್ ಗೀಸರ್ ಲೀಕ್ ಆಗಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಯಾರಾದರೂ ಇದ್ದಿದ್ದರೆ ಭೂಮಿಕಾ ಪ್ರಾಣ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ಭಾವಿಸಿದ್ದಾರೆ. ಭೂಮಿಕಾ ಮೂಲತಃ ಹಾಸನ ತಾಲೂಕಿನವರು ಎನ್ನಲಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.
ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಗ್ಯಾಸ್ ಗೀಜರ್ ಸೋರಿಕೆಯಾಗಿದ್ದ ವೇಳೆ ಸ್ನಾನದ ಗೃಹದ ಕಿಟಕಿ ಬಾಗಿಲು ಕೂಡ ಬಂದ್ ಆಗಿತ್ತು ಎನ್ನಲಾಗಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

