ಬೆಳಗಾವಿ: ನಾಳೆಯಿಂದ ಬೆಳಗಾವಿ ಚಳಿಗಾಲದ ಅಧಿವೇಶನ (Belagavi Winter Session) ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಚಳಿಗಾಲದ ಅಧಿವೇಶನವು 10 ದಿನಗಳ ಕಾಲ ನಡೆಯಲಿದೆ. ಪ್ರತಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದೆ. ಇಲ್ಲಿಯವರೆಗೆ ಈ ಅಧಿವೇಶನಕ್ಕಾಗಿ ಒಟ್ಟು 170 ಕೋಟಿ ರೂ. ವೆಚ್ಚ ಆಗಿದೆ.

ಈ ಬಾರಿ 21 ಕೋಟಿ ರೂ. ಖರ್ಚಾಗುವ ಲೆಕ್ಕಾಚಾರವಿದೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿವೆ. 6 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿವೆ. ಪೊಲೀಸರಿಗಾಗಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚಿಸುವುದಕ್ಕಾಗಿ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ. ಆದರೆ, ಅಧಿವೇಶನ ಬೆಂಗಳೂರು ಅಧಿವೇಶನದಂತೆ ಚರ್ಚೆ, ಜಗಳಕ್ಕೆ ಸೀಮಿತವಾಗುತ್ತಿದೆಯೇ ಹೊರತು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತವೆ. ಸರ್ಕಾರ ಸಾಕಷ್ಟು ಭರವಸೆಗಳನ್ನು ನೀಡುತ್ತದೆ. ಆದರೆ, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಬಾರಿಯೂ 84 ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ರೈತರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಸರ್ಕಾರಿ ನೇಮಕಾತಿಗಾಗಿ ಆಗ್ರಹಿಸಲು ಯುವ ಸಮೂಹ ಮುಂದಾಗಿದೆ. ಹೀಗಾಗಿ ಈ ಅಧಿವೇಶನವಾದರೂ ಪ್ರಯೋಜನಕ್ಕೆ ಬರುತ್ತದೆಯೇ ಕಾಯ್ದು ನೋಡಬೇಕಿದೆ.

Share.
Leave A Reply